ಬಾಳೆಯಲ್ಲಿ ರೋಗ ನಿವಾರಣೆ ಅಸಾಧ್ಯ


ಬಾಳೆ ಸಸ್ಯಕ್ಕೆ ವೈರಸ್ ರೋಗ ಬಂದರೆ ಅದರ ನಿವಾರಣೆಗೆ ಪ್ರಯತ್ನಗಳನ್ನು ಮಾಡುವುದು ವ್ಯರ್ಥ. ಬಾಳೆಗೆ  ಬನಾನಾ ಬಂಚೀ ಟಾಪ್ ವೈರಸ್ ರೋಗ ಸಾಮಾನ್ಯ. ಇದನ್ನು ಗುರುತಿಸುವಿಕೆ ಕೆಲವೊಮ್ಮೆ ಕಷ್ಟವಾಗುತ್ತದೆ. ಚಿಹ್ನೆ ಗೊತ್ತಾದ ತಕ್ಷಣ ಆ ಸಸ್ಯವನ್ನು ನಾಶಮಾಡಬೇಕು. ತಡವಾದರೆ ಅದರಲ್ಲಿ ಕುಳಿತು ರಸ ಹೀರಿದ ಕೀಟಗಳು ಆರೋಗ್ಯವಂತ ಬಾಳೆ ಸಸ್ಯದ ರಸ ಹೀರಿ ಅದಕ್ಕೂ ರೋಗ ತರುತ್ತದೆ. ಆದ ಕಾರಣ ಚಿಹ್ನೆಯನ್ನು ಪ್ರಾರಂಭದಲ್ಲಿ ಗುರುತಿಸಿ ಆ ಬಾಳೆ ಸಸ್ಯವನ್ನು ಬುಡ ಸಮೇತ ನಾಶಮಾಡಬೇಕು. ಇದನ್ನು banana banchy top virus ಎನ್ನುತ್ತಾರೆ.  Pentalonia nigronervosa ಎಂಬ ಎಫಿಡ್ ನಿಂದ ಪ್ರಸಾರವಾಗುತ್ತದೆ. ಸಾಮಾನ್ಯವಾಗಿ ಇದು ಸಸ್ಯ ಮೂಲದಿಂದ ಬರುತ್ತದೆ.

ಚಿಹ್ನೆಗಳು :  ರೋಗ ತಗುಲಿದ ಬಾಳೆಯ ಎಲೆ ಸ್ವಲ್ಪ ಗಿಡ್ಡವಾಗುತ್ತದೆ. ಎಲೆಗೆ ಗಡಸುತನ (ಶಕ್ತಿ ) ಇರುವುದಿಲ್ಲ. ಬೆರಳಿನಲ್ಲಿ ಮುಟ್ಟಿದಾಗ ಅಡ್ಡಕ್ಕೆ ಹರಿಯುತ್ತದೆ. ಪತ್ರ ಹರಿತ್ತು ಕಡಿಮೆಯಾಗಿ ಹಳದಿಯಾಗಿರುತ್ತದೆ. ಕ್ರಮೇಣ ಎಲೆಗಳು ಸಣ್ಣದಾಗುತ್ತಾ ಗಚ್ಚತರಹ ಆಗುತ್ತದೆ. ಬಾಳೆ ಗೊನೆ ಹಾಕುವ ಸಮಯದಲ್ಲಿ ರೋಗ ಬಂದರೆ ಗೊನೆ ವಕ್ರವಾಗಿ - ನೇರವಾಗಿ ಬಿಡುತ್ತದೆ. ಕಾಯಿಗಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ. ಬಾಳೆಹಣ್ಣಿಗೆ ನೈಜ ರುಚಿ ಇರುವುದಿಲ್ಲ. ಗೊನೆ ಹಾಕುವ ಮುನ್ನ ಬಂದರೆ ಗೊನೆ ಹಾಕುವುದಿಲ್ಲ.

ನಿರ್ವಹಣೆ :  ಈ ರೋಗ ರಸ ಸ್ಪರ್ಶದಿಂದ ಪ್ರಸಾರವಾಗುತ್ತದೆ. ಗಡ್ಡೆ ಸಮೇತ ಕಿತ್ತು ನಾಶ ಮಾಡಬೇಕು. ಅದರ ಬೇರೆ ಸಸ್ಯವನ್ನು ಉಳಿಸಬಾರದು. ಅಗೆದು ತೆಗೆದ ಹಾರೆ-ಗುದ್ದಲಿಯಲ್ಲಿ ಬೇರೆ ಬಾಳೆ ಕಡಿಯಬೇಕಾದರೆ ಅದನ್ನು ಬಿಸಿ ಮಾಡಿ ಉಪಯೋಗಿಸಬೇಕು. ಎಲೆ ಇತ್ಯಾದಿ ಕಡಿದ ಕತ್ತಿಯನ್ನೂ ಹಾಗೇ ಮಾಡಿ ಮತ್ತೆ ಬೇರೆ ಬಾಳೆಗೆ ಉಪಯೋಗಿಸಬೇಕು. ಕಂದು ಆಯ್ಕೆ ಮಾಡುವಾಗ ಜಾಗರೂಕತೆ ವಹಿಸಬೇಕು. ಬಾಳೆ ಬೆಳೆಸುವಾಗ ವಾಹಕವಾದ ಎಫಿಡ್ ನಾಶಕ್ಕೆ ಕೀಟನಾಶಕ ರೋಗರ್ (2.5ಮಿಲಿ 1ಲೀ ನೀರು) ಅನ್ನು ಸಿಂಪಡಿಸಬೇಕು. ಯಾವುದೇ ಕಾರಣಕ್ಕೂ ರೋಗ ತಗುಲಿದ ನಂತರ ಅದು ಸರಿಯಾದೀತೆಂಬ ಆಶೆ ಬೇಡ. ಹರಡದಂತೆ ತಡೆಯುವುದೇ ನಿರ್ವಹಣೆ. ಈ ರೋಗಕ್ಕೆ ನಿರೋಧಕ ತಳಿಯನ್ನು ಪ್ರಪಂಚದಲ್ಲಿ ಎಲ್ಲೂ ಕಂಡು ಹಿಡಿಯಲಾಗಿಲ್ಲ. ಬಾಳೆ ಬೆಳೆಸುವಾಗ ತೋಟವನ್ನು ನಿರ್ಲಕ್ಷ್ಯ ಮಾಡುವದರಿಂದ ಈ ರೋಗ ಪ್ರಾರಂಭವಾಗುತ್ತದೆ. ನಂತರ ಹರಡುತ್ತದೆ.


No comments:

Post a Comment