ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಉಪಯೋಗಿಸುತ್ತಾರೆ. ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು. ಇದನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.
ಕರಿಮೆಣಸಿನ ಬಳ್ಳಿ: ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.
ವಿಧಗಳು: ಕರಿಮೆಣಸನ್ನು ಇನ್ನೂ ಮಾಗದ ಹಸಿ ಕಾಳುಮೆಣಸಿನಿಂದ ತಯಾರಿಸುತ್ತಾರೆ. ಹಸಿಯಾದ ಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತಿನವರೆಗೆ ಕುದಿಸಿ ನಂತರ ಶುಧ್ದೀಕರಿಸಿದ ಕಾಳನ್ನು ಒಣಗಿಸುತ್ತಾರೆ. ಈ ಕ್ರಿಯೆಯು ಕಾಳಿನಲ್ಲಿರುವ ಜೀವಕೋಶದ ಹೊರಪದರವನ್ನು ತುಂಡರಿಸಿ, ಕಾಳು ಬೇಗನೆ ಕಂದಲು[ಪಚನಕ] ಸಹಾಯ ಮಾಡುತ್ತದೆ. ಕಾಳುಗಳನ್ನು ಸಾಮಾನ್ಯವಾಗಿ ಬಿಸಿಲಿನಲ್ಲಿ ಅಥವ ಯಂತ್ರಗಳಲ್ಲಿ ಕೆಲವು ದಿನಗಳವರೆಗೆ ಒಣಗಿಸಲಾಗುತ್ತದೆ. ಈ ಸಮಯದಲ್ಲಿ ಕಾಳಿನ ಸುತ್ತಲಿರುವ ಹಣ್ಣು ಸಂಕುಚನಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಒಣಗಿದ ಕಾಳನ್ನು ಕರಿಮೆಣಸು ಎನ್ನುತ್ತಾರೆ.
ಮೆಣಸಿನ ಹೊರ ಕವಚವನ್ನು ಬೇರ್ಪಡಿಸಿ ಉಳಿಯುವ ಕಾಳಿಗೆ ಬಿಳಿ ಮೆಣಸು ಎನ್ನುತ್ತಾರೆ. ಚೆನ್ನಾಗಿ ಹಣ್ಣಾದ ಮೆಣಸನ್ನು ಸುಮಾರು ಒಂದು ವಾರ ನೀರಿನಲ್ಲಿ ನೆನೆಸಿಟ್ಟರೆ, ಅದರ ಹಣ್ಣಿನಂಥಹ ಹೊರಕವಚ ಮೆತ್ತಗಾಗಿ ಕೊಳೆಯಲಾರಂಭಿಸುತ್ತದೆ. ನೀರಿನಿಂದ ಹೊರತೆಗೆದು ಉಜ್ಜಿದರೆ, ಈ ಹಣ್ಣಿನ ಅಂಶ ಹಾಗೂ ಬೀಜ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಬೀಜವನ್ನು ಒಣಗಿಸಿದಾಗಿ ಬಿಳಿಮೆಣಸು ತಯಾರಾಗುತ್ತದೆ. ಇನ್ನೂ ಮಾಗದ ಮೆಣಸನ್ನು ಒಣಗಿಸಿ ತಯಾರಿಸಲಾದ ಕರಿಮೆಣಸಿನ ಹೊರ ಕವಚವನ್ನು ತಗೆದು ಬಿಳಿಮೆಣಸು ತಯಾರಿಸುವ ಪದ್ಧತಿಯೂ ಇದೆ.
ಕರಿಮೆಣಸಿನ ಗಿಡವು ಬಹುವಾರ್ಷಿಕ ಬಳ್ಳಿಯಾಗಿದ್ದು ಸುಮಾರು ೪ ರಿಂದ ೫ ಮೀಟರ್ ವರೆಗೂ ಬೆಳೆಯಬಲ್ಲದ್ದಾಗಿದೆ. ಇದು ಮರ, ಕಂಬ ಅಥವಾ ಚಪ್ಪರದ ಸಹಾಯದಿಂದ ಬೆಳೆಯಬಲ್ಲದು. ಇದು ಅಗಲವಾಗಿ ಹರಡುವಂಥಹ ಬಳ್ಳಿಯಾಗಿದ್ದು, ನೆಲ ಮುಟ್ಟಿದಲ್ಲೆಲ್ಲಾ ಬೇರೂರುತ್ತದೆ. ಎಲೆಗಳು ಪರ್ಯಾಯವಾಗಿದ್ದು, ೫ ರಿಂದ ೧೦ ಸೆ.ಮೀ ಉದ್ದವಾಗಿದ್ದು , ೩ ರಿಂದ ೬ ಸೆ.ಮೀ ಅಗಲವಾಗಿರುತ್ತದೆ. ಹೂವುಗಳು ಚಿಕ್ಕದ್ದಾಗಿದ್ದು, ತೂಗಾಡುವಂಥಹದ್ದಾಗಿದ್ದು, ಎಸಳುಗಳು ಎಲೆಗಳ ಹತ್ತಿರ ೪ ರಿಂದ ೮ ಸೆ.ಮೀ ಉದ್ದವಾಗಿದ್ದು, ಹಣ್ಣು ಬಲಿಯುತ್ತಿದ್ದಂತೆ ಎಸಳುಗಳು ೭ ರಿಂದ ೧೫ ಸೆ.ಮೀ ಉದ್ದವಾಗುತ್ತದೆ.
ಕರಿಮೆಣಸಿನ ಗಿಡವು ತೀರ ಶುಷ್ಕವಲ್ಲದ ಹಾಗು ಪ್ರವಾಹಕ್ಕೆ ಒಳಗಾಗದಂಥಹ, ತೇವಾಂಶಸಹಿತ, ಹೀರಿಕೊಳ್ಳುವಂಥಹ ಹಾಗೂ ಸಾವಯವ ಕೂಡಿತ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಗಿಡವನ್ನು ೪೦ - ೫೦ ಸೆ.ಮೀ ಉದ್ದದ ತುಂಡುಗಳಿಂದ, ಸುಮಾರು ೨ ಮೀ ದೂರದಲ್ಲಿರುವ ಒರಟಾದ ಮೇಲ್ಮೈ ಉಳ್ಳ ಮರಗಳ ಸಹಾಯದಿಂದ ಬೆಳೆಸಲಾಗುತ್ತದೆ. ಬಳ್ಳಿ ಚೆನ್ನಾಗಿ ಬೆಳೆಯಲು ನುಣುಪಾದ ಮೇಲ್ಮೈಗಿಂತ ಒರಟಾದ ಮೇಲ್ಮೈ ಅನುಕೂಲವಾಗಿರುತ್ತದೆ. ಅಕ್ಕ ಪಕ್ಕದ ಮರಗಳು ಅನತಿ ದೂರದಲ್ಲಿದ್ದು ಬಳ್ಳಿಗೆ ಬೇಕಾದ ನೆರಳು ಹಾಗು ವಾತಾಯನ ಕೊಡುತ್ತದೆ. ಬೇರುಗಳು ಕೊಳೆತ ಎಲೆಗಳಿಂದ ಹಾಗೂ ಗೊಬ್ಬರದಿಂದ ಆವೃತವಾಗಿದ್ದು, ಕಾಂಡಗಳನ್ನು ವರ್ಷಕ್ಕೆರಡು ಬಾರಿ ಕತ್ತರಿಸಿ ಅಚ್ಚುಕಟ್ಟಾಗಿರಿಸಲಾಗುತ್ತದೆ. ಶುಷ್ಕ ವಾತಾವರಣದಲ್ಲಿ ೩ ವರ್ಷದ ವರೆಗೆ ನವ ಸಸ್ಯಗಳಿಗೆ ಶುಷ್ಕ ಮಣ್ಣಿನಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ನೀರುಣಿಸಬೇಕಾಗುತ್ತದೆ. ತಮ್ಮ ೪ನೇ ಅಥವಾ ೫ನೇ ವರ್ಷದಲ್ಲಿ ಸಸ್ಯಗಳಲ್ಲಿ ಹಣ್ಣು ಬಿಡುತ್ತವೆ ಹಾಗೂ ಅಲ್ಲಿಂದ ಸುಮಾರು ೭ ವರ್ಷಗಳ ವರೆಗೂ ಫಲ ಕೊಡುತ್ತವೆ. ನೆಡಲಿಕ್ಕಾಗಿ ಬಳ್ಳಿಯ ತುಂಡುಗಳನ್ನು, ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಆಧರಿಸಿ ಆಯ್ಕೆಮಾಡಿದ ತಳಿಗಳಿಂದ ಸಾಧಾರಣವಾಗಿ ಪಡೆದುಕೊಳ್ಳಲಾಗುತ್ತದೆ. ಒಂದು ಕಾಂಡದಲ್ಲಿ ಸುಮಾರು ೨೦ ರಿಂದ ೩೦ ಫಲ ಕೊಡುವ ಶೀರ್ಷಕಗಳಿರುತ್ತವೆ. ಶೀರ್ಷಕಗಳ ಮೂಲ ಕೆಂಪಗಿನ ಬಣ್ಣ ಬರಲಾರಂಭಿಸಿದಾಗಲಿಂದ ಹಣ್ಣಾಗುವ ಮೊದಲು ಕುಯಿಲು ಮಾಡಲಾಗುತ್ತದೆ, ಆದರೆ ಪೂರ್ತಿ ಬೆಳೆದ ಹಾಗೂ ಗಟ್ಟಿಯಾದ ಫಲವನ್ನು ಹಣ್ಣಾಗಲು ಬಿಟ್ಟರೆ ಅದು ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು , ನಂತರ ಉದುರಿ ಹೋಗಿ ಹಾಳಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಶುಷ್ಕ ಬಿಸಿಲಿನಲ್ಲಿ ಒಣಗಿಸಿದಾಗ ಕಾಳುಮೆಣಸು ಸುಲಿದುಕೊಂಡು ಹೊರಬರುತ್ತವೆ.
No comments:
Post a Comment