ಕಬ್ಬಿನ ಕಣ್ಣಿನಿಂದ ಸಸಿ ತಯಾರಿ



ಕಬ್ಬು ಕೋಲು ನಾಟಿ ಸಾಮಾನ್ಯವಾಗಿ ಎಲ್ಲೆಡೆ ಚಾಲ್ತಿಯಲ್ಲಿರುವ ವಿಧಾನ. ಕಬ್ಬಿನ ಕಣ್ಣಿನಿಂದ ಪ್ರತ್ಯೇಕವಾಗಿ ಸಸಿ ತಯಾರಿಸಿ ನಾಟಿ ಮಾಡುವ ಪದ್ಧತಿ ಇದೀಗ ರಾಜ್ಯದಲ್ಲಿ ಬೆಳೆಗಾರರ ಮನಗೆಲ್ಲುತ್ತಿದೆ.
ಸಾಮಾನ್ಯವಾಗಿ ಕಬ್ಬು ನಾಟಿ ಹೇಗೆ?
    ಒಮ್ಮೆ ನೆಟ್ಟರೆ ಮುಂದಿನ ಎರಡು ವರ್ಷಗಳವರೆಗೆ ಕಬ್ಬು ಇಳುವರಿ ಪಡೆಯಬಹುದು. ನಾಟಿಗಾಗಿ ತೆಗೆದಿರಿಸಿದ ಕಬ್ಬನ್ನು ಮೂರು ಕಣ್ಣು ಅಂದರೆ ಸಾಮಾನ್ಯವಾಗಿ ಒಂದೂವರೆ ಅಡಿಯಷ್ಟು ಉದ್ದವಾಗಿ ತುಂಡರಿಸಿ ಗೊಬ್ಬರ ಹಾಕಿ ಉಳುಮೆ ಮಾಡಿ ತಯಾರಿಸಿಟ್ಟ ಜಮೀನಿನಲ್ಲಿ ಉದ್ದವಾಗಿ ನಾಟಿ ಮಾಡಲಾಗುತ್ತದೆ. ಮೇಲ್ಬಾಗಕ್ಕೆ ಅರ್ಧ ಅಡಿಯಷ್ಟು ಮಣ್ಣು ಹಾಕಿ ಮುಚ್ಚಲಾಗುತ್ತದೆ. ಇದನ್ನು ಕೋಲುನಾಟಿ ಎಂದು ಕರೆಯಲಾಗುತ್ತದೆ.
ಕಣ್ಣಿನಿಂದ ಸಸಿ ತಯಾರಿ
    ಈ ವಿಧಾನದಲ್ಲಿ ಮೊದಲು ಕಣ್ಣಿನಿಂದ ಸಸಿಗಳನ್ನು ತಯಾರಿಸಿಕೊಳ್ಳಬೇಕು. ಯಂತ್ರದ ಮೂಲಕ ಕಬ್ಬಿನ ಕಣ್ಣುಗಳನ್ನು ಸುಮಾರು ಒಂದುವರೆ ಇಂಚು ಉದ್ದಕ್ಕೆ ಕತ್ತರಿಸಿಕೊಳ್ಳಬೇಕು. ಸಸಿ ತಯಾರಿಸಲು ಕೊಕೊಪೆಟ್ ಅಗತ್ಯ. ಕೊಕೊಪೆಟ್  (ತೆಂಗಿನ ನಾರಿನ ಹುಡಿಯ ಗೊಬ್ಬರ )ನ್ನು ಟ್ರೇಗೆ ತುಂಬಿಸಿ ಅದರೊಳಗೆ ಕಬ್ಬಿನ ಕಣ್ಣನ್ನು ಹಾಕಿ ಮುಚ್ಚಬೇಕು. ಕಣ್ಣು  (ಚಿಗುರು ಬರುವ ಭಾಗ)ಮೇಲ್ಭಾಗಕ್ಕಿರುವಂತೆ ನೋಡಿಕೊಳ್ಳಬೇಕು. ಟ್ರೇಯನ್ನು ಶೆಡ್ ನೆಟ್ ನೊಳಗೂ ಸಂಗ್ರಹಿಸಿಡಬಹುದು. ಎಂಟು ದಿನಗಳಲ್ಲಿ ಚಿಗುರು ಬರುತ್ತದೆ. ಒಂದು ತಿಂಗಳುಗಳ ಕಾಲ ದಿನಕ್ಕೆ ಮೂರು ಬಾರಿಯಂತೆ ನೀರು ಚಿಮುಕಿಸಬೇಕು. ಒಂದು ತಿಂಗಳಲ್ಲಿ ಸಸಿಗಳು ಒಂದುವರೆಯಿಂದ ಮೂರು ಇಂಚು ಎತ್ತರಕ್ಕೆ ಬೆಳೆಯುತ್ತವೆ. ನಂತರ ಇವನ್ನು ಗದ್ದೆಯಲ್ಲಿ ನಾಟಿ ಮಾಡಬಹುದು. ತಯಾರಿಸಲು ಬೇಕಾದ ಟ್ರೇ ಅಂಗಡಿಯಲ್ಲಿ ದೊರೆಯುತ್ತದೆ. ಟ್ರೇಗೆ ಮೂವತ್ತು ರೂಪಾಯಿ ಬೆಲೆಯಿದೆ. ಒಂದು ಟ್ರೇಯಲ್ಲಿ ಐವತ್ತು ಕಣ್ಣು ಸಸಿ ತಯಾರಿಸಬಹುದು. ಕೊಕೊಪೆಟ್ ನ್ನು ತೆಂಗಿನ ನಾರಿನಿಂದ ತಯಾರಿಸುವುದರಿಂದ ಇದು ಅಪ್ಪಟ ಸಾವಯವ. ಸಸಿಗಳ ಬುಡಕ್ಕೆ ಹಾಕಿದ ನೀರನ್ನು ಹೀರಿಕೊಳ್ಳುವ ಶಕ್ತಿಯಿದೆ. ಐದು ಕೇಜಿ ಕೊಕೊಪೆಟ್ ಗೆ ಇನ್ನೂರು ರೂ. ದರವಿದೆ. ಒಂದು ಕಣ್ಣು ಸಸಿ ತಯಾರಿಗೆ ಒಂದು ರೂ. ಖರ್ಚು ತಗಲುತ್ತದೆ. ಇತ್ತೀಚಿನ ದಿನಗಳಲ್ಲಿ ನರ್ಸರಿಗಳಲ್ಲಿ ಕಬ್ಬಿನ ಸಸಿಗಳು ಸಿಗುತ್ತಿದ್ದು ಒಂದು ಸಸಿಗಳ ರೂ.2.30 ಪೈಸೆ ದರವಿದೆ.
    ಕಣ್ಣು ಸಸಿಯಿಂದ ಲಾಭ ಏನು?
ಸಾಮಾನ್ಯ ನಾಟಿ ಮಾಡುವಾಗ ಮೂರು ಕಣ್ಣಿನಲ್ಲಿ ಒಂದು ಕಣ್ಣು ಭೂಮಿಯ ಅಡಿಗೆ ಬೀಳುತ್ತದೆ. ಅದು ಮೊಳಕೆ ಬರಲಾರದು. ಸಾಮಾನ್ಯವಾಗಿ ಎರಡು ಕಣ್ಣಿನಿಂದ ಮಾತ್ರ ಸಸಿ ಪಡೆಯಬಹುದಾಗಿದೆ. ನೀರು ಹಾಯಿಸುವಾಗ ಕಾಲಿನಿಂದ ತುಳಿದರೆ ನಾಟಿ ಮಾಡಿದ ಕಬ್ಬಿನ ತುಂಡು ಭೂಮಿಯ ಅಡಿಗೆ ಸೇರಿ ಮೊಳಕೆ ಬರುವುದಿಲ್ಲ. ಕಣ್ಣಿನಿಂದ ಸಸಿ ತಯಾರಿಸಿದ ಸಸಿಗಳನ್ನು ಸಸಿಯಿಂದ ಸಸಿಗೆ ಒಂದುವರೆ ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರದಲ್ಲಿ ಒಂದೊಂದಾಗಿ ನಾಟಿ ಮಾಡಲಾಗುತ್ತದೆ. ಸಾಂಪ್ರದಾಯಿಕ ಪದ್ದತಿಯಲ್ಲಿ ಒಂದು ಎಕರೆಗೆ ನಾಟಿ ಮಾಡಲು ಮೂರು ಟನ್ ಕಬ್ಬು ಬೇಕಾಗುತ್ತದೆ. ಒಂದು ಎಕರೆಗೆ ಕಣ್ಣು ಸಸಿ ನಾಟಿ ಮಾಡುವುದಾದರೆ ಕೇವಲ ಮೂರು ಕ್ವಿಂಟಾಲ್ ಸಾಕಾಗುತ್ತದೆ. ಸಸಿ ನಾಟಿಯಿಂದ ನಾಲ್ಕು ಬೆಳೆ ತೆಗೆಯಬಹುದಾಗಿದೆ. ಸಾಂಪ್ರದಾಯಿಕ ಕೋಲು ನಾಟಿ ವಿಧಾನದಲ್ಲಿ ವರ್ಷದಿಂದ ವರ್ಷಕ್ಕೆ ಚಿಗುರು ಹೆಚ್ಚು ಬಂದು ಇಳುವರಿ ಕಡಿಮೆಯಾಗುತ್ತದೆ. ಜೂನ್,ಜುಲೈ ತಿಂಗಳಲ್ಲಿ ಸಸಿ ನಾಟಿ ಮಾಡಿದರೆ ಹನ್ನೆರಡರಿಂದ ಹದಿನಾಲ್ಕನೇ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಹತ್ತು ಹನ್ನೆರಡು ತಿಂಗಳಲ್ಲಿ ಕಬ್ಬು ಕಟಾವಿಗೆ ಬಂದರೆ ಅದರಲ್ಲಿ ನೀರಿನಾಂಶ ಜಾಸ್ತಿಯಿದ್ದು ಸಕ್ಕರೆ ಅಂಶ ಕಡಿಮೆಯಿರುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ಎಕರೆಗೆ ನಲವತ್ತು ಟನ್ ಇಳುವರಿ ಬಂದರೆ ಸಸಿ ನಾಟಿ ವಿಧಾನದಲ್ಲಿ ಅರುವತ್ತು ಟನ್ ಇಳುವರಿ ದೊರೆಯುತ್ತದೆ.
ಎರಡು ವಿಧಾನದಲ್ಲೂ ಬೆಳೆಗೆ ತಿಪ್ಪೆ,ರಾಸಾಯನಿಕ ಗೊಬ್ಬರ ನೀಡಬೇಕಾಗುತ್ತದೆ. ಸಸಿ ನಾಟಿ ಮಾಡಿದ ನಂತರ ಎಂಟು ದಿನಗಳ ಕಾಲ ದಿನಕ್ಕೆ ಮೂರು ಬಾರಿ, ನಂತರ ಹದಿನೈದು ದಿನಕ್ಕೊಮ್ಮೆ ಬಾರಿ ನೀರು ನೀಡಬೇಕು. ವರ್ಷದಲ್ಲಿ ಹದಿನೈದರಿಂದ ಹದಿನೆಂಟು ಬಾರಿ ನೀರು ಬೇಕೆ ಬೇಕು. ಮಳೆಗಾಲ ನೀರಿನ ಅಗತ್ಯವಿಲ್ಲ, ಐದು ತಿಂಗಳ ಬೇಸಿಗೆಗಾಲದಲ್ಲಿ ನೀರು ನೀಡಬೇಕಾಗುತ್ತದೆ.


No comments:

Post a Comment