ಕರಿಮೆಣಸಿನ ಸಸ್ಯಾಭಿವೃದ್ದಿ ವಿಧಾನ


ಕರಿಮೆಣಸಿನ ಸಸ್ಯಾಭಿವೃದ್ದಿ 

ಕುಂಭ ಮಾಸ ಮಾಗಿ ತಿಂಗಳ ನಂತರ ಎಲ್ಲಾ ನಮೂನೆಯ ಸಸ್ಯಗಳೂ ಚಿಗುರಲು ಪ್ರಾರಂಭವಾಗುತ್ತದೆ. ಚಿಗುರುವ ಸಮಯದಲ್ಲಿ ಬೇರು ವಲಯ ಚುರುಕಾಗಿರುತ್ತದೆ. ಕಣ್ಣು ಕಸಿ, ಸಾಮಿಪ್ಯ ಕಸಿ , ಮೃದು ಕಾಂಡ ಕಸಿ ಅಥಾವ ಗೆಲ್ಲು ಬೇರು ಬರಿಸುವಿಕೆ ಎಲ್ಲದಕ್ಕೂ ಈ ಕಾಲ ಪ್ರಸಕ್ತ. ಶಿವರಾತ್ರಿ ಕಳೆದ ನಂತರ, ಬಿಸಿಲು, ವಾತವರಣದಲ್ಲಿ ಉಷ್ಟತೆಯೊಂದಿಗೆ ಅಧಿಕ ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಇದು ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ವಾತಾವರಣ. ಮಾವು, ಗೇರು, ಕರಿಮೆಣಸಿನ ಸಸ್ಯಾಭಿವೃದ್ದಿಗೆ ಇದು ಸಕಾಲ.
ಈಗ ಇದರ ಸಸ್ಯಾಭಿವೃದ್ದಿ ಮಾಡಿಕೊಂಡರೆ ಮುಂದೆ ಮುಂಗಾರು ಮಳೆ ಪ್ರಾರಂಭದಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ.

ಬಳ್ಳಿಯ ಆಯ್ಕೆ: ಮೂಲ ಬಳ್ಳಿಯ ಬುಡದಲ್ಲಿ ನೆಲದಲ್ಲಿ ಹಬ್ಬಿ ಬೆಳೆಯುವ ಬಳ್ಳಿಗಳ ತುಂಡುಗಳಿಗೆ ಬೇರು ಬರಿಸಿ ಸಸಿ ಮಾಡಿಕೊಳ್ಳುವುದೇ ಮೆಣಸಿನ ಸಸ್ಯಾಭಿವೃದ್ದಿ ವಿಧಾನ  (True character propogation)ಎನ್ನುತ್ತಾರೆ. ಇದರಲ್ಲಿ ನಾವು ಆಯ್ಕೆ ಮಾಡುವ ತಾಯಿ ಸಸ್ಯದ ಎಲ್ಲಾ ಗುಣಗಳು ಇರುತ್ತದೆ. ಇದನ್ನು ಕತ್ತರಿಸಿ ಒಂದು ಒದ್ದೆ ಮಾಡಿದ ಗೋಣಿ ಚೀಲದಲ್ಲಿ ಸುತ್ತಿ ನೆರಳಿಗೆ ತಂದು ಎಲೆ ತೆಗೆಯಬೇಕು. ಒಂದು ಇಲ್ಲ ಎರಡು ಗಂಟುಗಳಿರುವ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಎಳೆ ಭಾಗವನ್ನು ಬಿಟ್ಟು ದಟ್ಟ ಹಸಿರು ಬಣ್ಣದ ಬಳ್ಳಿಯನ್ನು ಮಾತ್ರವೇ ಸಸ್ಯಾಭಿವೃದ್ದಿಗೆ ಬಳಸಿ. ಒಂದು ಗಂಟು ಇರುವಂತೆ ತುಂಡರಿಸಿದರೆ ಹೆಚ್ಚು ಸಸ್ಯಾಭಿವೃದ್ದಿ ಮಾಡೀಕೊಳ್ಳಬಹುದು. ಒಂದೇ ಗಂಟಿನಲ್ಲಿ ಬೇರು ಮತ್ತು ಚಿಗುರು ಮೊಳಕೆ ಬರುವ ಕಾರಣ ಅದಕ್ಕೆ ಶಕ್ತಿ ಹೆಚ್ಚು.

ಕಡ್ಡಿ ನಾಟಿ : ತುಂಡು ಮಾಡಿದ ಕಡ್ಡಿಗಳನ್ನು ಶೇ.0.1 ರ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿದರೆ ಒಳ್ಳೆಯದು. ಪಾಲಿಥೀನ್ ಚೀಲಕ್ಕೆ ತುಂಬುವ ಮಾದ್ಯಮಕ್ಕೆ ಶೇ.1ರ ಹ್ಯೂಮಿಕ್ ಅಸಿಡ್ ಮಿಶ್ರಣ ಮಾಡಬೇಕು. ಲಬ್ಯವಿದ್ದರೆ ಟ್ರೈಕೋಡರ್ಮಾ ಮತ್ತು ವ್ಯಾಮ್ ಮಿಶ್ರಣ ಮಾಡಿದರೆ ಒಳ್ಳೆಯದು. ಸೂಕ್ಷ್ಮಾಣು ಜೀವಿ ಸೇರಿಸಿದ ಮಾದ್ಯಮವಾದರೆ ಆ ದಿನಕ್ಕೆ ಎಷ್ಟು ಬೇಕೋ ಅಷ್ಟೇ ಮಿಶ್ರಣ ಮಾಡಿ. ಅದೇ ದಿನ ಪಾಲಿಥೀನ್ ಚೀಲದ ಮಾದ್ಯಮವನ್ನು ನೀರಿನಲ್ಲಿ ಪೂರ್ತಿ ಒದ್ದೆಯಾಗುವಂತೆ ನೆನೆಸಬೇಕು. ಇಲ್ಲವಾದರೆ ಸೂಕ್ಷ್ಮಾಣು ಜೀವಿಗಳು ತೇವಾಂಶ ಕೊರತೆಯಿಂದ ಸಾಯಬಹುದು. ಹೀಗೆ ಸಿದ್ಧಪಡಿಸಿದ ಚೀಲದಲ್ಲಿ ಒಂದು ಕಡ್ಡಿಯ ಮೂಲಕ ತೂತುಮಾಡಿ , ಅದರೊಳಗೆ ಸಿದ್ದಪಡಿಸಿದ ಎರಡು ತೂಂಡುಗಳನ್ನು ಇಟ್ಟು ಹದವಾಗಿ ಬೆರಳುಗಳಿಂದ ಒತ್ತಬೇಕು. ನಂತರ ಅದನ್ನು ಪಾಲಿಥೀನ್ ಗೂಡಿನಲ್ಲಿ ಇಡಿ. ಹೀಗೆ ಮಾಡಿದಾಗ ಬಳ್ಳಿ ತುಂಡುಗಳು ಒಂದು ತಿಂಗಳಲ್ಲಿ ಚಿಗುರು, ಬೇರು ಬಿಡುತ್ತವೆ. ನಂತರ  ಪಾಲಿಥೀನ್ ಗೂಡಿನಿಂದ ಪ್ರತ್ಯೇಕಿಸಿ ಹೊರಗೆ 75% ನೆರಳಿನಲ್ಲಿ ಇಡಬೇಕು.
ನೀರಾವರಿ ವಾರಕ್ಕೂಮ್ಮೆ ಹಿತವಾಗಿ ಮಾಡಿದರೆ ಸಾಕು.
ನಾಟಿ ಮಾಡಲು ಬಳಸುವ ಮಾದ್ಯಮಕ್ಕೆ ಮಣ್ಣು+ಮರಳು+ಕೊಟ್ಟಿಗೆಗೊಬ್ಬರ (ಕಾಂಪೋಸ್ಟು ಗೊಬ್ಬರ )ಮಿಶ್ರಣ ಮಾಡಬೇಕು. (2+1+1).
ಪಾಲೀಥೀನ್ ಹೊದಿಕೆ ಹಾಕಿ ಮಾಡುವ ಸಸ್ಯೋತ್ಪಾದನೆಯಲ್ಲಿ ಬೇರು ಬರುವಿಕೆ ಶೇ.97ರಷ್ಟು ಇರುತ್ತದೆ.

ಕಡಿಮೆ ಬಳ್ಳಿಗಳಿಂದ ಸಸ್ಯಾಭಿವೃದ್ದಿ :
ಹೆಚ್ಚಿನ ಪ್ರಮಾಣದ ಬಳ್ಳಿಗಳ ಲಭ್ಯತೆ ಇಲ್ಲವಾದರೆ , ಇರುವ ಬಳ್ಳಿಗಳಲ್ಲೇ ಹೆಚ್ಚು ಸಸ್ಯಾಭಿವೃದ್ದಿ ಮಾಡಲು ಅನುಸರಿಸಬೇಕಾದ ವಿಧಾನವೆಂದರೆ,ಒಂದು ಪಾಲಿಥೀನ್ ಚೀಲದ ಸಸಿಯನ್ನು ಆಧಾರವಾಗಿಟ್ಟುಕೊಂಡು ಅದರ ಬಳ್ಳಿಯನ್ನು ಹರಿಯ ಬಿಟ್ಟು ಪ್ರತೀ ಗಣ್ಣಿನಕೆಳಗೆ ಪಾಲಿಥೀನ್ ಚೀಲ ಇಟ್ಟು ಅದಕ್ಕೆ ಬಳ್ಳಿಯ ಗಂಟನ್ನು ಕಡ್ಡಿ ಮುರಿದು ಒತ್ತಿ ತಾಗಿಸಿದರೆ ಆ ಗಣ್ಣಿನಲ್ಲಿ ಬೇರುಗಳು ಇಳಿಯುತ್ತದೆ. ಸುಮಾರು ಒಂದು ತಿಂಗಳ ನಂತರ ಅದನ್ನು ತಾಯಿ ಗಿಡದಿಂದ ಪ್ರತ್ಯೇಕಿಸಿದಾಗ ಕೆಲವೇ ದಿನಗಳಲ್ಲಿ ಅದರಲ್ಲಿ ಹೊಸ ಮೊಗ್ಗು ಬಂದು ಸಸಿಯಾಗುತ್ತದೆ. ಇಂತಹ ವಿಧಾನದಲ್ಲಿ ನಿರಂತರ ಸಸ್ಯೋತ್ಪಾದನೆ ಮಾಡುತ್ತಿರಬಹುದು.

ಇದರ ಬದಲು 3 ಅಡಿ ಅಗಲ ಮತ್ತು 4-5ಅಡಿಯ ಪ್ಲಾಸ್ಟಿಕ್ ವಯರ್ ಮೆಷ್ ನ್ನು ವರ್ತುಲಾಕಾರದಲ್ಲಿ ಸುತ್ತಿ, ಅದರ  ಒಳಗೆ ಫಲವತ್ತಾದ ಮಾದ್ಯಮ ಅಥವಾ ಕೊಕೊಪೇಟ್ ತುಂಬಿ ಅದನ್ನು ನೇರವಾಗಿ ಇಟ್ಟು ಅದರ ಬುಡದಲ್ಲಿ ಸಸಿಯನ್ನು ನೆಟ್ಟು ಮೇಲೆ ಏರುವಂತೆ ಮಾಡಿದರೆ ಪ್ರತೀ ಗಣ್ಣಿನಲ್ಲಿ ಬೇರು  ಬರುತ್ತದೆ. ಅದರ ನಂತರ ಪ್ರತ್ಯೇಕಿಸಿ ಸಸ್ಯಾಭಿವೃದ್ದಿ ಮಾಡಬಹುದು.

ಬೀಜದ ಸಸ್ಯಾಭಿವೃದ್ದಿ : ನೈಸರ್ಗಿಕವಾಗಿ ಹಕ್ಕಿ ಹಿಕ್ಕೆಗಳ ಮೂಲಕ ಬಿದ್ದು ಸಸಿಯಾಗುತ್ತದೆ. ಹಕ್ಕಿಗಳು ತಿಂದು ಹಾಕಿದ ಕಾಳುಗಳನ್ನು ಆರಿಸಿ ಬಿತ್ತನೆ ಮಾಡಿದರೆ ಸಸಿ ಆಗುತ್ತದೆ. ಇದರಲ್ಲಿ ತಳಿ ಉನ್ನತೀಕರಣ ಆಗುವ ಸಾಧ್ಯತೆಯೂ ಇದೆ.

ಕರಿಮೆಣಸನ್ನು ಕಸಿ ಕಟ್ಟಿಯೂ ಸಸ್ಯಾಭಿವೃದ್ದಿ ಮಾಡಬಹುದು. 

1 comment: