ಇಂಟರ್ಸಿ ಎಂದರೆ ಏನು ?
ಸಾಮಾನ್ಯವಾಗಿ ಎಲ್ಲಾ ನರ್ಸರಿಗಳಲ್ಲಿ ಇಂಟರ್ಸಿ ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯವಿವೆ. ಅಷ್ಟೇ ಏಕೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರ ಆಶೆ ಇಂಟರ್ಸಿ ಮಂಗಳ ಸಸಿ ನೆಡುವುದು.
ಇಷ್ಟಕ್ಕೂ ಇಂಟರ್ಸಿ ಎಂದರೆ ಏನು, ಎಂಬ ಬಗ್ಗೆ ನರ್ಸರಿಗಳವರಿಗೂ, ಬೆಳೆಸಲು ಇಚ್ಚಿಸುವವರಿಗೂ ಗೊತ್ತಿಲ್ಲ. ಇದು ಇಂಟರ್ಸಿ ಅಲ್ಲ, ಇಂಟರ್ - ಸೆ (Inter - SE) ಇದರ ಪೂರ್ವಾಪರ ಗೊತ್ತಿಲ್ಲದೆ ನರ್ಸರಿಗಳವರು ಸಸಿ ಮಾರುತ್ತಾರೆ. ರೈತರು ಸಸಿ ನೆಡುತ್ತಾರೆ. ಆದರೆ ಇದು ಒಂದು ಹೊಸ ತಳಿ ಅಲ್ಲ.
1972 ನೇ ಇಸವಿಯಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮಂಗಳ ಎಂಬ ತಳಿಯನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲಿ ಸಾಧಾರಣ ಇಳುವರಿ ಕೊಡಬಲ್ಲ ಸ್ಥಳೀಯ ತಳಿಗಳ ಅಡಿಕೆಯೇ ಚಾಲ್ತಿಯಲ್ಲಿತ್ತು. ಅಧಿಕ ಇಳುವರಿಯ ಇನ್ನೊಂದು ತಳಿ ಬೇಕು ಎಂಬ ಉದ್ದೇಶದಿಂದ ವಿಜ್ಞಾನಿಗಳು , ಅಂತರ ಗಣ್ಣುಗಳು ಹತ್ತಿರವಾಗಿರುವಂತೆ, ಇಳುವರಿ ಸ್ಥಿರತೆ ಇರುವಂತೆ, ಕಾಯಿಕಚ್ಚುವಿಕೆ ಪ್ರಮಾಣ 60%ಕ್ಕೂ ಹೆಚ್ಚು ಇರುವಂತೆ , 8-10 ಆರೋಗ್ಯವಂತ ಗರಿಗಳು ಇರುವಂತೆ, ರೋಗ ಕೀಟ ಬಾಧೆ ತಡೆದುಕೊಳ್ಳುವ ಶಕ್ತಿ ಮುಂತಾದ ಐದು ಮಾನದಂಡಗಳನ್ನು ಇಟ್ಟುಕೊಂಡು ಮಂಗಳ ತಳಿಯನ್ನು ಬಿಡುಗಡೆ ಮಾಡಿದ್ದರು. ಕ್ರಮೇಣ ಈ ತಳಿಯಲ್ಲಿ ಮೇಲೆ ತಿಳಿಸಲಾದ ಪ್ರಮುಖ ಗುಣಗಳ ಕ್ಷೀಣತೆ ಉಂಟಾಗಲಾರಂಬಿಸಿ ಮಂಗಳದ ನೈಜ ಗುಣಲಕ್ಷಣ ಕಡಿಮೆಯಾಗಲಾರಂಬಭಿಸಿತು. ಆ ಸಮಯದಲ್ಲಿ ಮಂಗಳ ತಳಿಯ ಶುದ್ದ ಗುಣವನ್ನು ಮರಳಿ ಪಡೆಯುದಕ್ಕಾಗಿ ಮತ್ತೆ ಕ್ರಾಸಿಂಗ್ ಮಾಡಿ ಪಡೆದ ಬೀಜವೇ ಮಂಗಳ ಇಂಟರ್ ಸೆ.
ಅಡಿಕೆ - ತೆಂಗು ಮುಂತಾದ ಬೆಳೆಗಳಲ್ಲಿ 60%ಕ್ಕೂ ಹೆಚ್ಚು ಗಾಳಿಯ ಮೂಲಕ ಪರಾಗಸ್ಪರ್ಶ ನಡೆಯುತ್ತದೆ. ಆದ ಕಾರಣ ಇದರಲ್ಲಿ ತಲೆಮಾರಿನಿಂದ ತಲೆಮಾರಿಗೆ ತಳಿಗುಣದಲ್ಲಿ ವ್ಯತ್ಯಾಸವಾಗುವುದು ಸಹಜ. ಅದೇ ಮಂಗಳ ತಳಿಯಲ್ಲೂ ಆಗಿದೆ. ಅದಕ್ಕಾಗಿ 1982 ನೇ ಇಸವಿಯಲ್ಲಿ ಶುದ್ದ ಗುಣ ಹೊಂದಿರುವ ಮಂಗಳ ತಳಿಗಳ ನಡುವೆ ಕ್ರಾಸಿಂಗ್ ಮಾಡಿ ಇಂಟರ್-ಸೆ ಹೆಸರಿನಲ್ಲಿ ಬೀಜಗಳನ್ನು ಕೊಡಲಾಯಿತು.
ಶುದ್ಧ ಗುಣ ಹೊಂದಿರುವ ಮಂಗಳ ತಳಿಯ ಹೂ ಗೊಂಚಲು ಅರಳುವ ಸಮಯದಲ್ಲಿ ಅದರ ಗಂಡು ಹೂವನ್ನು ತೆಗೆದು ಅದರ ಪರಾಗವನ್ನು ಸಂಗ್ರಹಿಸಲಾಗುತ್ತದೆ. ಗಂಡುಹೂವು ತೆಗೆದ ನಂತರ ಆ ಹೂ ಗೊಂಚಲಿಗೆ ಮಿಶ್ರ ಪರಾಗ ಸ್ಪರ್ಶ ಆಗದಂತೆ ಬಟ್ಟೆಯನ್ನು ಹೊದಿಸಲಾಗುತ್ತದೆ. ಗಂಡು ಹೂ ಮೊದಲು ಅರಳುತ್ತದೆ. ಸುಮಾರು 21 ದಿನದ ತರುವಾಯ ಹೆಣ್ಣು ಹೂಗಳು ಪರಾಗ ಸ್ವೀಕರಿಸಲು ಸಜ್ಜಾಗುತ್ತವೆ. ಆ ಸಮಯದಲ್ಲಿ ಮೊದಲೇ ಸಂಗ್ರಹಿಸಿಟ್ಟ ಪರಾಗವನ್ನು ಆ ಮರದ ಹೆಣ್ಣು ಹೂವಿಗೆ ಪರಾಗಸ್ಪರ್ಶ ಮಾಡಲಾಗುತ್ತದೆ. ಹೀಗೆ ಪರಾಗಸ್ಪರ್ಶಕ್ಕೊಳಗಾದ ಬೀಜದಲ್ಲಿ ಶುದ್ಧ ಗುಣ ಇರುತ್ತದೆ. ಈ ಬೀಜವನ್ನೇ ನಾಟಿ ಮಾಡಿದರೆ ಅದರಲ್ಲಿ ಎಲ್ಲಾ ಶುದ್ಧ ಗುಣ ಇರತ್ತದೆ. ಅದರ ಬೀಜಗಳಿಂದ ಮತ್ತೆ ಸಸಿ ಮಾಡಿ ನೆಟ್ಟಾಗ ಅದು ಎರಡನೆಯ ತಲೆಮಾರು ಆಗುವ ಕಾರಣ ಪೂರ್ಣ ಶುದ್ಧ ಗುಣ ಇರುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಸುಮಾರು 35 ವರ್ಷಕ್ಕೆ ಹಿಂದೆ CPCRI ನಲ್ಲಿ ಪರಸ್ಪರ ಕ್ರಾಸಿಂಗ್ ಮಾಡಿ ಇಂಟರ್ ಸೆ ತಳಿಯನ್ನು ಪಡೆಯಲಾಗಿದೆ. ಆ ನಂತರ ಅಲ್ಲಿಂದ ಬೀಜ ತಂದು ಅಥವಾ ಅಲ್ಲಿಂದ ಬೀಜ ತಂದು ಬೆಳೆಸಿದವರಿಂದ ಪಡೆದ ಬೀಜವನ್ನು ನಾವು ಇಂಟರ್ಸಿ ಮಂಗಳ ಎಂದು ನಾಟಿ ಮಾಡುತ್ತೇವೆ. ಇದಕ್ಕೆ ಎಷ್ಟು ತಲೆಮಾರು ಆಗಿದೆ ಎಂದು ಯಾರಿಗೂ ಗೊತ್ತಿಲ್ಲ.
ತಲೆಮಾರುಗಳು ಹೆಚ್ಚಾದಂತೆ ಅದರ ಮೂಲ ಗುಣ ವ್ಯತ್ಯಾಸವಾಗುತ್ತದೆ. ಅದು ಕೆಲವು ಧನಾತ್ಮಕ ಗುಣವನ್ನೂ ಪಡೆಯಬಹುದು ಮತ್ತೆ ಕೆಲವು ಅವಗುಣವನ್ನೂ ಪಡೆಯಬಹುದು. ಆದ ಕಾರಣ ರೈತರು ಮಂಗಳ ಇಂಟರ್ಸಿ ಬಗ್ಗೆ ಬಹಳಷ್ಟು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮಂಗಳ ಮೂಲ ತಳಿಗೂ ಇಂಟರ್ ಮಂಗಳಕ್ಕೂ ಅಂಥಃ ವೆತ್ಯಾಸಗಳಿಲ್ಲ. ಹಾಗೆ ನೋಡಿದರೆ ಮಿಶ್ರ ಪರಾಗ ಸ್ಪರ್ಶದಿಂದಲೇ ಕಾಯಿ ಕಚ್ಚುವ ಗುಣ ಪಡೆದ ಅಡಿಕೆಯಲ್ಲಿ ಈಗ ಪ್ರತೀಯೊಬ್ಬರ ತೋಟದಲ್ಲೂ ಇಂಟರ್ ಸೆ ಸ್ವಾಭಾವಿಕವಾಗಿಯೇ ಆಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಮಂಗಳ ಅಲ್ಲದೆ ಮೊಹಿತ್ ನಗರ ತಳಿಯಲ್ಲೂ 1991 ರಲ್ಲಿ ಇಂಟರ್ ಕ್ರಾಸಿಂಗ್ ಮಾಡಲಾಗಿದೆ. ಸುಮಂಗಳ, ಶ್ರೀಮಂಗಳ ತಳಿಯಲ್ಲಿ 1985 ರಲ್ಲಿ ಇಂಟರ್ ಕ್ರಾಸಿಂಗ್ ಮಾಡಿ ಶುದ್ದ ತಳಿ ಪಡೆಯಲಾಗಿದೆ.
No comments:
Post a Comment