ಸಂಪದ್ಭರಿತ ದ್ರವರೂಪದ ಗೊಬ್ಬರಗಳು



ಸಾವಯವ ಕೃಷಿಯಲ್ಲಿ ವಿವಿಧ ಬೆಳೆಗಳಲ್ಲಿ ಸಾವಯವ ಗೊಬ್ಬರಗಳಾದ ಕೊಟ್ಟಿಗೆಗೊಬ್ಬರ, ಕಾಂಪೋಸ್ಟು ಗೊಬ್ಬರ, ಎರೆಹುಳ ಗೊಬ್ಬರ, ಹಸಿರೆಲೆ ಗೊಬ್ಬರಗಳು ಇತ್ಯಾದಿ ಪೋಷಕಾಂಶಗಳ ಪೂರೈಕೆ ಹಾಗೂ ಬೆಳವಣಿಗೆ ಹಂತದಲ್ಲಿ ಉತ್ತಮ ಬೆಳವಣಿಗೆಗೆ ದ್ರವ ಲೂಪದ ಗೊಬ್ಬರಗಳಾದ ಗಂಜಲ,ಎರೆಜಲ , ಜೀವರಸಸಾರ , ಜೀವಾಮೃತ , ಸಸ್ಯಾಮೃತ , ಅಮೃತಪಾನಿ , ಬಯೋಸಾಲ , ನಂದಿನಿ, ತೆಂಗಿನ ಎಳನೀರು, ಹಾಲು , ಮಜ್ಜಿಗೆ ಇತ್ಯಾದಿಗಳನ್ನು ಉಪಯೋಗಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ದ್ರವರೂಪದ ಗೊಬ್ಬರಗಳನ್ನು ಪೋಷಕಾಂಶ ಪೂರೈಸಲು, ಬೆಳೆ ಪ್ರಚೊದಕದಂತೆ ಹಾಗೂ ಕೀಟ ರೋಗಗಳ ನಿರ್ವಹಣೆ ಮಾಡಲು ಉಪಯೋಗಿಸಬಹುದು ಹಾಗೂ ಇದರಿಂದ ಬೆಳೆಗಳು ಪುಷ್ಠಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.
ದ್ರವರೂಪದ ಗೊಬ್ಬರಗಳನ್ನು ರೈತರು ವಿವಿಧ ರೀತಿಯಿಂದ ತಯಾರಿಸಿ ಉಪಯೋಗಿಸುತ್ತಿದ್ದಾರೆ.  ಎಲ್ಲಾ ದ್ರವರೂಪದ ಗೊಬ್ಬರಗಳನ್ನು ಸೆಗಣಿ , ಗಂಜಲ , ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಪದಾರ್ಥಗಳನ್ನು ಮತ್ತು ಅಣುಜೀವಿಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಇದು ಅತ್ಯುತ್ತಮ ಸ್ಥಳೀಯ ತಂತ್ರಜ್ಞಾನವಾಗಿದ್ದು ವಿವಿಧ ಮಾದ್ಯಮಗಳ ಮುಖಾಂತರ ಪ್ರಸಾರವಾಗುತ್ತಿದೆ.
 
 ಜೀವರಸಸಾರ (ಬಯೋಡೈಜೆಸ್ಟರ್) ಎರೆಜಲ , ಜೀವಾಮೃತ , ಪಂಚಗವ್ಯ , ಸಸ್ಯಾಮೃತ , ಅಮೃತಪಾನಿ , ನಂದಿನಿ, ಮುಂತಾದ ಸಸ್ಯ ಜನ್ಯ ಹಾಗೂ ಪ್ರಾಣಿಜನ್ಯ ಪದಾರ್ಥಗಳನ್ನು ಉಪಯೋಗಿಸಿ ನೀರಿನೊಂದಿಗೆ ಮಿಶ್ರಣ ಮಾಡಿ  8-10 ದಿವಸ ಅದನ್ನು ಕಳಿಸಿ ಪೋಷಕಾಂಶ ಪೂರೈಸಲು ಹಾಗೂ ಸಸ್ಯ ಪ್ರಚೊದಕವಾಗಿ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು.

     1. ಬಯೋಡೈಜೆಸ್ಟರ್  (ಜೈವಿಕ ಜೀವ ರಸಸಾರ)
ಕೃಷಿ  ತ್ಯಾಜ್ಯ , ಸಗಣಿ, ಗಂಜಲ ಮತ್ತು ನೀರು ಇವುಗಳನ್ನು ಒಂದು ತೊಟ್ಟಿಯಲ್ಲಿ ಹಾಕಿ, ಕೊಳೆಸಿ ಅದರಿಂದ ಬರುವ ದ್ರವರೂಪದ ವಸ್ತುವನ್ನು ರಸಗೊಬ್ಬರದ ಬದಲಿಗೆ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವಾಗಿ ಬಳಸಬಹುದಾಗಿದೆ.  ಈ ದ್ರವರೂಪದ ವಸ್ತುವನ್ನು ಮಣ್ಣಿನ ಸಾವಯವ ಹೊದಿಕೆ ಮೇಲೆ ಸಿಂಪರಣೆ ಮಾಡಿದ್ದಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸುವುದು. ನೀರು ಹಿಡಿದಿಡುವ ಸಾಮರ್ಥ್ಯವನ್ನು ವೃದ್ದಿಸುವುದು. ಹಾಗೂ ಕೀಟ ಮತ್ತು ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯ ವೃದ್ದಿಯಾಗುತ್ತದೆ.

ಬಯೋಡೈಜೆಸ್ಟರ್ ನಿಂದಾಗುವ ಪ್ರಯೋಜನಗಳು
* ಬಯೋಡೈಜೆಸ್ಟರ್ ಶೆಖರಣೆ ಪೋಷಕಾಂಶಗಳ ನಿರ್ವಹಣೆಗೆ ಹಾಗೂ ಸಸ್ಯ ಸಂರಕ್ಷಣೆಗಾಗಿ ಬಳಕೆ ಮಾಡಬಹುದು.
* ಉಪಯುಕ್ತವಾದ ಅಣುಜೀವಿಗಳಾದ ಅಜೋಸ್ಟರಿಲಂ ಮತ್ತು ರಂಜಕ ಕರಗಿಸುವ ಸೂಕ್ಷ್ಮಾಣು ಜೀವಿಗಳು ಈ ಶೇಖರಣೆಯಲ್ಲಿರರವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಾಯಕವಾಗುತ್ತದೆ.
* ಅಂಟಾಗೊನಿಷ್ಟಿಕ್ ಶಿಲೀಂದ್ರವಾದ ಟ್ರೈಕೋಡರ್ಮಾ ಸಹ ಇದರಲ್ಲಿದೆ.

         ಬಯೋಡೈಜೆಸ್ಟರ್ ನಿರ್ಮಾಣ 
* 30 ಅಡಿ ಉದ್ದ 12.5 ಅಡಿ ಅಗಲ ಮತ್ತು 3 ಅಡಿ ಆಳದ ಡೈಜೆಸ್ಟರ್ ತೊಟ್ಟಿಯನ್ನು ಕಲ್ಲು ಮತ್ತು ಸಿಮೆಂಟ್ ನಿಂದ ನಿರ್ಮಿಸುವುದು.
* ಡೈಜೆಸ್ಟರ್ ತೊಟ್ಟಿಯನ್ನು ಮಧ್ಯಭಾಗಕ್ಕೆ ಕಲ್ಲುಗಳಿಂದ ಇಳಿಜಾರಾಗಿ ನಿರ್ಮಿಸುವುದು.
* ಡೈಜೆಸ್ಟರ್ ತೊಟ್ಟಿಯ ಪಕ್ಕದಲ್ಲಿ  2.5 ಅಡಿ ಉದ್ದ  2.5 ಅಡಿ ಅಗಲ ಮತ್ತು ಮೂರು ಅಡಿ ಆಳ ಅಳತೆಯ ಶೇಖರಣಾ ತೊಟ್ಟಿಯನ್ನು ನೆಲ ಮಟ್ಟದಿಂದ  2 ಅಡಿ ಕೆಳಗೆ ನಿರ್ಮಿಸುವುದು.

       ಬೇಕಾಗುವ ಸಾಮಾಗ್ರಿಗಳು:
1. ಆಕಳ ಸೆಗಣಿ 80 ಕೆ.ಜಿ
2. ಆಕಳ ಗಂಜಲ 40 ಲೀ.
3. ನೀರು 200 ಲೀ.
4. ಕೃಷಿ / ಬೆಳೆ ಉಳಿಕೆಗಳು  75 ಕೆ.ಜಿ

ವಿಧಾನ :
* ಡೈಜೆಸ್ಟರ್ ತೊಟ್ಟಿಗೆ ಕೃಷಿ ತ್ಯಾಜ್ಯಗಳು , ಸಗಣಿ ಮತ್ತು ಗಂಜಲವನ್ನು ಹಾಕಿ ನೀರನ್ನು ತುಂಬಬೇಕು. ಈ ರೀತಿ  5 ದಿನಗಳ ಅಂತರದ  3 ಕಂತುಗಳಲ್ಲಿ ಸೇರಿಸಿ 45 ದಿನಗಳವರೆಗೆ ಕೊಳೆಯಲು ಬಿಡಬೇಕು.
* ಡೈಜೆಸ್ಟರ್ ನಿಂದ ತಯಾರಾದ ಮಿಶ್ರಣವು ತೊಟ್ಟಿಯಲ್ಲಿ ಶೇಖರಣೆಯಾಗುತ್ತದೆ.
  ಈ ರೀತಿ ಬಂದ ಮಿಶ್ರಣವನ್ನು ಹನಿ ನೀರಾವರಿ / ಸಿಂಪರಣೆ ಮುಖಾಂತರ ಪೋಷಕಾಂಶಗಳ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆಗೆ ಬಳಕೆ ಮಾಡಬಹುದು.

     2. ಪಂಚಗವ್ಯ ತಯಾರಿಸುವ ವಿಧಾನ:

ಆಕಳ ಸೆಗಣಿ 8 ಕೆ.ಜಿ+ಆಕಳ ತುಪ್ಪ  1 ಕೆ.ಜಿ ಯನ್ನು ಪ್ರತೀ ದಿನ ಕಲಿಸುವುದು.  2 ದಿನಗಳ ನಂತರ ಗೋಮೂತ್ರ 3 ಲೀ. + ನೀರು 10 ಲೀ. ಸೇರಿಸುವುದು,  15 ದಿನಗಳ ನಂತರ ಆಕಳ ಹಾಲು 2 ಲೀ. + ಆಕಳ ಮೊಸರು 2 ಲೀ. + ತೆಂಗನ ಎಳನೀರು  2 ಲೀ. + ಬೆಲ್ಲ 250 ಗ್ರಾಂ. + 12 ಕಳಿತ ಬಾಳೆಹಣ್ಣು ಸೇರಿಸಬೇಕು.
ಪ್ರತಿದಿನ  2-3 ಬಾರಿ ಕೋಲಿನಿಂದ ಕಲಸಬೇಕು.
ಹೀಗೆ ತಯಾರಿಸಿದ ದ್ರಾವಣವನ್ನು ಸೋಸಿ ಸಿಂಪರಣೆಗೆ ಬಳಸಬೇಕು.

     3. ಎರೆಜಲ:
ಎರೆ ಘಟಕದಂತೆ ಎರೆಜಲ ಘಟಕವನ್ನು ಸಿಂಮೆಂಟ್ , ಪ್ಲಾಸ್ಟಿಕ್ ಡ್ರಮ್, ಪ್ಲಾಸ್ಟಿಕ್ ಟ್ರೇ, ಮಣ್ಣಿನ ಗಡಿಗೆ ಇತ್ಯಾದಿಗಳಲ್ಲಿ ಎರೆ ಹುಳು ಬಳಸಿ ಅವುಗಳ ಹಿಕ್ಕೆಗಳ ತೊಟ್ಟಿಯ ಮೇಲೆ ಹೆಚ್ಚಿನ ನೀರು ಸಿಂಪರಣೆ ಮಾಡಿ ತೊಳೆತ ನೀರು ಎರೆಜಲವಾಗಿ ಸಂಗ್ರಹವಾಗುತ್ತದೆ. ಎರೆಜಲ ಸಸ್ಯ ಪೋಷಕಾಂಶ ಹಾಗೂ ಬೆಳೆ ಪ್ರಚೋದಕವನ್ನು ಮತ್ತು ಕೀಟ ನಿರೋಧಕಗಳನ್ನು ಹೊಂದಿರುತ್ತದೆ. ಪ್ರಸ್ತುತ ದಿನಗಳಲ್ಲಿ ರೈತರು ಎರೆಜಲ ತಯಾರಿಕೆಯಲ್ಲಿ ಅನೇಕ ವೈಜ್ಞಾನಿಕ ವಿಧಾನಗಳನ್ನು ಬಳಸುತ್ತಿದ್ದಾರೆ.

    4. ಸಸ್ಯಾಮೃತ:
ಸಸ್ಯಾಮೃತವನ್ನು ತಯಾರಿಸಲು 50 ಕೆ.ಜಿ. ಆಕಳ ಸಗಣಿ. 500ಗ್ರಾಂ ಜೇನುತುಪ್ಪ.  2 ಲೀ. ಎಳನೀರು. 5 ಲೀ. ಮಜ್ಜಿಗೆ. 200 ಲೀ. ನೀರು ಹಾಕಿ ಕಲಿಸಬೇಕು. ಒಂದು ವಾರದ ನಂತರ  5 ಪ್ರತಿಶತ ದ್ರಾವಣ ತಯಾರಿಸಿ ಸಿಂಪರಣೆ ಮಾಡಬೇಕು.

      5. ಅಮೃತಪಾನಿ:
ಅಮೃತಪಾನಿ ತಯಾರಿಸಲು ಸಗಣಿ 10 ಕೆ.ಜಿ, ಬಯೋಗ್ಯಾಸ್ ಬಗ್ಗಡ 15 ಲೀ.  ಜೇನುತುಪ್ಪ  500 ಗ್ರಾಂ. ಆಕಳ ತುಪ್ಪ  250 ಗ್ರಾಂ. ನೀರು 50 ಲೀ. ಎಲ್ಲವನ್ನು ಚೆನ್ನಾಗಿ ಬೆರೆಸಿ ಒಂದು ದಿನ ಕಳಿಸಿ ಸೋಸಬೇಕು. ಅಮೃತಪಾನಿಯನ್ನು  10 ಪ್ರತಿಶತ ಪ್ರಮಾಣದಲ್ಲಿ ಬೆಳೆಗಳೆಗೆ ಸಿಂಪರಣೆ ಮಾಡಬಹುದು ಅಥಾವ ನೀರಿನ ಜೊತೆಗೆ ಕೊಡಬಹುದು.

     6. ಇ.ಎಂ ಸುಕ್ಷ್ಮಾಣು ದ್ರಾವಣ:
ಒಂದು ಪ್ಲಾಸ್ಟಿಕ್ ಡ್ರಮ್ ತೆಗೆದುಕೊಂಡು ಅದರಲ್ಲಿ ಶುದ್ದವಾದ 20 ಲೀ. ನೀರು ಹಾಕಿ, ಅದಕ್ಕೆ 1 ಕೆ.ಜಿ. ಸಾವಯವ ಬೆಲ್ಲ ಮತ್ತು ಒಂದು ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಿಸಬೇಕು. ಬಾಯಿಯನ್ನು ಭದ್ರವಾಗಿ ಗಾಳಿಯು ಒಳಗೆ ಹೋಗದಂತೆ ಮುಚ್ಚಿ, ನೆರಳಿನಲ್ಲಿ ಇಡಬೇಕು.
ಪ್ರತಿದಿನ ಎರಡು ಸಲ ಡ್ರಮ್ ಅಲುಗಾಡಿಸಬೇಕು. ಹದಿನೈದು ದಿನದಲ್ಲಿ ಇ.ಎಂ.(ಇಕೋ ಮೈಕ್ರೋ) ಸೂಕ್ಷ್ಮಾಣು ದ್ರಾವಣ ತಯಾರಾಗುತ್ತದೆ. ಇದನ್ನು 10 ಪ್ರತಿಶತ ಪ್ರಮಾಣದಲ್ಲಿ ಬುಡಕ್ಕೆ ಎರೆಯಬಹುದು. ಇದರಿಂದ ಮಣ್ಣಿನ ಲಸಾಯನಿಕ ಹಾಗೂ ಜೈವಿಕ ಕ್ರಿಯೆ ಅಧಿಕವಾಗುತ್ತದೆ.

       6. ಬೀಜಾಮೃತ:
ಈ ದ್ರಾವಣವನ್ನು ತಯಾರಿಸಲು 5 ಕೆ.ಜಿ. ಆಕಳ ಸಗಣಿಯನ್ನು ತಿಳಿಯಾದ ಬಟ್ಟೆಯಲ್ಲಿ ಕಟ್ಟಿ 50 ಲೀ. ನೀರಿನ ಡ್ರಮ್ ನಲ್ಲಿ ಒಂದ ರಾತ್ರಿ ತೂಗುಹಾಕಬೇಕು. ಮಾರನೆಯ ದಿನ ಬಟ್ಟೆಯನ್ನು ನೀರಿನಲ್ಲಿ ಅದ್ದಿ ತೆಗೆಯಬೇಕು. ಮತ್ತು ಸಗಣಿಯನ್ನು ಹಿಂಡಬೇಕು. ಇದಕ್ಕೆ 5 ಲೀ. ಗೋಮೂತ್ರ ಬೆರೆಸಬೇಕು. ಅದೇ ರಾತ್ರಿ 50 ಗ್ರಾಂ. ಸುಣ್ಣವನ್ನು ಪ್ರತ್ಯೇಕವಾಗಿ ಒಂದು ಲೀ. ನೀರಿನಲ್ಲಿ ನನೆಸಿ ದ್ರಾವಣ ಮಾಡಿಕೊಂಡು ಮೂರನೇ ದಿನ ಈ ದ್ರಾವಣವನ್ನು ಸೆಗಣಿ ಮತ್ತು ಗೋಮೂತ್ರದ ಡ್ರಮ್ಮಿಗೆ ಬೆರೆಸಬೇಕು. ಬಿತ್ತನೆ ಬೀಜವನ್ನು ಒಂದು ನಿಮಿಷ ಬೀಜಾಮೃತದಲ್ಲಿ ಅದ್ದಿ ತೆಗೆದು ನೆರಳಿನಲ್ಲಿ ಆರಿಸಿ ಬಿತ್ತನೆಗೆ ಉಪಯೋಗಿಸಬೇಕು.

ಸಾವಯವ ಕೃಷಿಯಲ್ಲಿ ಹೀಗೆ ವಿವಿಧ ಮೂಲಗಳಿಂದ ಸಾಮಾನ್ಯವಾಗಿ ಸಾವಯವ ಗೊಬ್ಬರಗಳು , ದ್ರವರೂಪದ ಗೊಬ್ಬರಗಳು, ಜೈವಿಕ ಗೊಬ್ಬರಗಳು ಇತ್ಯಾದಿ ಬಳಸಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುತ್ತಾ ಸುಸ್ಥಿರ ಇಳುವರಿ ಪಡೆಯಬಹುದು.
                      ಕೃಪೆ: ಜ್ಞಾನವಿಕಾಸ ತರಬೇತಿ ಸಂಸ್ಥೆ

ಅಭಿಪ್ರಾಯಗಳನ್ನು ಕೆಳಗೆ ಕಾಮೆಂಟ್ ಮಾಡಿ.


Like Facebook page  


No comments:

Post a Comment