ಸೌತೆ ಕಾಯಿ ಬೇಸಿಗೆಯ ಪ್ರಮುಖ ತರಕಾರಿ ಬೆಳೆ. ಸೌತೆಕಾಯಿಯ ಇಳುವರಿ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಶೇ.20 ರಷ್ಟು ಹೆಚ್ಚುವರಿ ಇಳುವರಿ ಪಡೆಯಲು ಸಾಧ್ಯ.
ಸೌತೆಯನ್ನು ಬಿತ್ತನೆ ಮಾಡುವಾಗ ಜನವರಿ ತಿಂಗಳ ಎರಡನೇ ವಾರದ ನಂತರ ಬಿತ್ತನೆ ಮಾಡಬೇಕು. ಸಸಿಗಳು ಎರಡು ಮೂರು ಎಲೆ ಬರುವ ಸಮಯದೊಳಗೆ ಬುಡಕ್ಕೆ ಮಣ್ಣು ಏರಿಸಬೇಕು. ಯಾವುದೇ ನೆರಳು ಬೀಳುವ ಪ್ರದೇಶದಲ್ಲಿ ಬೆಳೆಸಬಾರದು. ಬಿತ್ತನೆ ಮಾಡುವಾಗ ಗರಿಷ್ಠ ಪ್ರಮಾಣದಲ್ಲಿ ಕೊಟ್ಟಿಗೆಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಸಸಿಗಳು ಸುಮಾರು ಎಂಟು ಹತ್ತು ಎಲೆ ಬಂದ ನಂತರ ತುದಿ ಚಿವುಟಿ ಕವಲು ಚಿಗುರುಗಳು ಬರುವಂತೆ ಮಾಡಬೇಕು. ಮೊದಲ ಕವಲು ಚಿಗುರುಗಳನ್ನು ಎಂಟು ಹತ್ತು ಎಲೆ ಬಂದ ನಂತರ ತುದಿ ಚಿವುಟುವ ಕೆಲಸ ಮಾಡಬೇಕು. ತುದಿ ಚಿವುಟಿ ಅಡ್ಡ ಚಿಗುರುಗಳು ಹೆಚ್ಚು ಬರುವಂತಾದರೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತದೆ. ಸೌತೆ, ಕುಂಬಳ, ಕಲ್ಲಂಗಡಿ ಮುಂತಾದ ಬೆಳೆಗಳಲ್ಲಿ ಹೆಣ್ಣು ಮತ್ತು ಗಂಡು ಹೂವುಗಳಿದ್ದು, ಹೆಣ್ಣು ಹೂವು ಬೇಗ ಬಂದಷ್ಟು ಉತ್ತಮ ಇಳುವರಿ ಪಡೆಯಲು ಸಾಧ್ಯ.
ಸೌತೆ ಸಾಲುಗಳಿಗೆ ಹರಿ ಅಥಾವ ಹನಿ ನೀರಾವರಿ ಮಾಡಬೇಕು. ನೀರು ಚಿಮುಕಿಸುವ ವ್ಯವಸ್ಥೆಯಿಂದ ಹೂವಿನ ಪರಾಗಕಣಗಳು ತೊಳೆದು ಹೋಗುತ್ತವೆ. ಬೆಳೆಯ ಅವಧಿ ಮೂರು ತಿಂಗಳಾದ ಕಾರಣ ನಾವು ಕೊಡುವ ಗರಿಷ್ಠ ಗೊಬ್ಬರದ ಮೇಲೆ ಬಳ್ಳಿಗೆ ಉತ್ತಮ ಬೆಳವಣಿಗೆ ಬರುತ್ತದೆ. ಪ್ರಾರಂಭದಲ್ಲಿ ಮೇಲು ಗೊಬ್ಬರವಾಗಿ ಕೊಟ್ಟಿಗೆ ಗೊಬ್ಬರವನ್ನು ನಂತರ ಮಣ್ಣು ಏರಿಸುವಾಗ ಮತ್ತೆ ಗೊಬ್ಬರವನ್ನು ನೀಡುವುದಲ್ಲದೆ ರಾಸಾಯನಿಕ ಗೊಬ್ಬರವನ್ನು ವಾರ ವಾರ ವಿಭಜಿತ ಕಂತುಗಳಲ್ಲಿ ನೀಡುತ್ತಾ ಬರಬೇಕು. ಹೂವಾಗುವ ಸಮಯದವರೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಸತ್ವದ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಕೊಡುತ್ತಾ ಬರಬೇಕು. ನಂತರ ಸಾರಜನಕ ಮತ್ತು ರಂಜಕವನ್ನು ಕಡಿಮೆ ಮಾಡಿ ಪೊಟ್ಯಾಶ್ ಗೊಬ್ಬರವನ್ನು ಹೆಚ್ಚಿಸತ್ತಾ ಬರಬೇಕು. ಆಗ ಕಾಯಿಗಳ ಗುಣಮಟ್ಟ ಚೆನ್ನಾಗಿರುತ್ತದೆ.
ಸೌತೆ ಬೆಳೆಯಲ್ಲಿ ಪ್ರಾರಂಭದ ಕಾಯಿಗಳು ಪುಷ್ಟಿಯಾಗಿರುತ್ತದೆ. ನಂತರದ ಕಾಯಿಗಳು ಗಾತ್ರ ಸಣ್ಣದಾಗಿ ಮುರುಟುವುದುಂಟು. ಇದಕ್ಕೆ ಕಾರಣ ಪೋಷಕಾಂಶದ ಕೊರತೆ. ಗಿಡದಲ್ಲಿ ಹೂ ಬಿಡುತ್ತಿರುವ ಹಂತದಿಂದ ಕಾಯಿ ಬೆಳೆಯುತ್ತಿರುವ ಸಮಯದವರೆಗೂ ಪೋಷಕಾಂಶ ನೀಡುತ್ತಿರಬೇಕು. ಬೆಳೆದ ಕಾಯಿಗಳನ್ನು ಆಗಾಗ ಕಟಾವು ಮಾಡುತ್ತಾ, ಉಳಿದ ಕಾಯಿಗಳಿಗೆ ಆಹಾರ ಸರಬರಾಜು ಆಗುವಂತೆ ಅನುವು ಮಾಡಿಕೊಡಬೇಕು. ಕಾಯಿಗಳಿಗೆ ನೆರವಾಗಿ ಬಿಸಿಲು ತಾಗದಂತೆ ಮರೆ ಮಾಡಬೇಕು.
ಈ ಲೇಖನವು ಕೃಷಿ ಅಧಿಕಾರಿಗಳ ಮಾಹಿತಿ ಮತ್ತು ಕೃಷಿಕರ ಅನುಭವವಾಗಿರುತ್ತದೆ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೆಳಗಡೆ ಕಾಮೆಂಟ್ ಮಾಡಿ.
ಫೇಸ್ಬುಕ್ ಪೇಜ್ ಲೈಕ್ ಮಾಡಿ
Like
No comments:
Post a Comment