ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇತ್ತೀಚಿನ ಕೆಲವು ವರ್ಷಗಳಿಂದ ಅಡಿಕೆ ಧಾರಣೆ ಏರಿಕೆಯ ಗತಿಯಲ್ಲಿದ್ದು, ಬೆಳೆಗಾರರು ಹೆಚ್ಚು ಮುತುವರ್ಜಿಯಿಂದ ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅಡಿಕೆಗೆ ಬೆಲೆ ಚೆನ್ನಾಗಿರುವ ಕಾರಣ ಸಾಂಪ್ರದಾಯಿಕ ಪ್ರದೇಶಗಳ ಬೆಳೆಗಾರರೂ ಅಲ್ಲದೆ ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಬೆಳೆಸುವವರು ಹೆಚ್ಚುತ್ತಿದ್ದಾರೆ. ಅಡಿಕೆ ಬೇಸಾಯಕ್ಕೆ ಹೊಸ ಹೊಸ ಪ್ರದೇಶಗಳು , ಅದರಲ್ಲೂ ಫಲವತ್ತತೆ ಕಡಿಮೆ ಇರುವ ಪ್ರದೇಶಗಳು ಸೇರ್ಪಡೆಗೊಳ್ಳುತ್ತಿರುವ ಕಾರಣ ಅಲ್ಲಿ ನಮ್ಮ ಸಂಪ್ರದಾಯಿಕ ಎನ್ ಪಿ ಕೆ ಗೊಬ್ಬರಗಳನ್ನಷ್ಟೇ ಪೊರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೆಚ್ಚು ಹೆಚ್ಚು ಬೆಳೆ ತೆಗೆಯುವಾಗ ಮಣ್ಣಿನ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿ ಉಪಯೋಗವಾಗುವ ಕಾರಣ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುವುದು ಸಾಮಾನ್ಯ. ಅತ್ಯಧಿಕ ಇಳುವರಿ ಪಡೆಯುವಾಗ ಅದಕ್ಕೆ ಸಮಾನಾಗಿ ಗೊಬ್ಬರಗಳನ್ನು ಒದಗಿಸುತ್ತಲೇ ಬರಬೇಕಾಗುತ್ತದೆ.
ಸಾಮಾನ್ಯವಾಗಿ ನಾವು ಎನ್ ಪಿ ಕೆ ಗೊಬ್ಬರಗಳನ್ನು ವರ್ಷ ವರ್ಷವೂ ಬಳಕೆ ಮಾಡುತ್ತೇವೆ. ಇದು ಪ್ರಧಾನ ಪೋಷಕಾಂಶವಾಗಿದ್ದು, ಅದಷ್ಟೇ ನಾವು ಪಡೆಯಲಿಚ್ಚಿಸುವ ಫಸಲಿಗೆ ಸಾಕಾಗುವುದಿಲ್ಲ ಎಂಬುದು ಕೆಲವು ರೈತರು ಕಂಡುಕೊಂಡ ಸಂಗತಿ. ಎನ್ ಪಿ ಕೆ ಗೊಬ್ಬರಗಳ ಜೊತೆಗೆ ಇತರ ಪೋಷಕಾಂಶಗಳನ್ನು ಬಳಕೆ ಮಾಡುವದರಿಂದ ಇಳುವರಿಯಲ್ಲಿ ಹೆಚ್ಚಳ ಉಂಟಾಗುತ್ತದೆ ಎಂಬುದು ಹಲವು ರೈತರ ತೋಟಗಳಲ್ಲಿ ಕಂಡ ವಿಚಾರ.
ದ್ವಿತೀಯ ಪೋಷಕಾಂಶಗಳಾಗಲೀ,ಸೂಕ್ಷ್ಮ ಪೋಷಕಾಂಶಗಳನ್ನಾಗಲೀ ಬಳಕೆ ಮಾಡುವ ಬಗ್ಗೆ ಹೆಚ್ಚಿನ ಅಡಿಕೆ ಬೆಳೆಗಾರರಿಗೆ ಗೊತ್ತಿಲ್ಲ. ಇದರಿಂದಾಗಿ ಒಂದು ವರ್ಷ ಉತ್ತಮ ಫಸಲು, ನಂತರದ ಒಂದು ವರ್ಷ ತುಂಬಾ ಕಡಿಮೆ ಫಸಲು ಹೀಗೆಲ್ಲಾ ವ್ಯತ್ಯಾಸವಾಗುತ್ತದೆ. ಹಾಗೆ ನೋಡಿದರೆ ಬೆಳೆಗಳಿಗೆ ಪ್ರಧಾನವಾಗಿ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವಂತದ್ದು ಇಂಗಾಲ, ಆಮ್ಲಜನಕ ಮತ್ತು ಜಲಜನಕ. ಇವುಗಳಇವುಗಳನ್ನು ಪ್ರಕೃತಿ ಉಚಿತವಾಗಿ ಒದಗಿಸುತ್ತದೆ. ಇವುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ದೊರೆಯುವಂತೆ ಮಾಡಲು ಬೇಸಾಯ ಮಾಡುವವರ ಪ್ರಯತ್ನವು ಸಾಕಇದೆ. ತೋಟದೊಳಗೆ ಹೆಚ್ಚು ಸುತ್ತಾಡುತ್ತಾ ಇರುವುದರಿಂದ , ಸಮರ್ಪಕ ಬಸಿಗಾಲುವೆ ಮಾಡಿ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲ ಮಾಡಿ ಕೊಟ್ಟು , ನೀರೊತ್ತಾಯದ ಸಮಯದಲ್ಲಿ ನೀರಾವರಿ ಮಾಡಿ ಸಲಹುವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕೃತಿಯಿಂದ ಈ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಲಭ್ಯ ಸ್ಥಿತಿಗೆ ತರಬಹುದು. ಉಳಿದಂತೆ ದ್ವಿತೀಯ ಪೋಷಕಾಂಶಗಳನ್ನು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ನಾವು ಯಾವುದಾದರೂ ಮೂಲದಲ್ಲಿ ಒದಗಿಸಿ ಕೊಡಲೇ ಬೇಕಾಗುತ್ತದೆ.
ಹಿಂದೆ ಕೃಷಿ ಕಡಿಮೆ ಪ್ರಮಾಣದಲ್ಲಿ ಇತ್ತು. ಅದೂ ಸಹ ಫಲವತ್ತಾದ ಭೂಮಿಯಲ್ಲಿ ಮಾತ್ರ ಕೃಷಿ ಇರುತ್ತಿತ್ತು. ಆ ಸಮಯದಲ್ಲಿ ಕೃಷಿಗೆ ಬಳಸಲು ಯತೇಚ್ಚ ಪ್ರಮಾಣದಲ್ಲಿ ಸಾವಯವ ವಸ್ತುಗಳು ಲಭ್ಯವಿತ್ತು. ಪ್ರತಿಯೊಬ್ಬ ಕೃಷಿಕನೂ ಕೊಟ್ಟಿಗೆಗೊಬ್ಬರ, ಸೊಪ್ಪು, ಸೌದೆ ಮುಂತಾದವುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಅವುಗಳಲ್ಲಿ ಸಸ್ಯ ಬೆಳವಣಿಗೆಗೆ ಅಗತ್ಯವಾದ ದ್ವಿತೀಯ ಪೋಷಕಗಳು ಮತ್ತು ಲಘುಪೋಷಕಗಳು ಲಭ್ಯವಾಗುತ್ತಿತ್ತು. ಹಿಂದಿನ ಕಾಲಕ್ಕೆ ಹೊಲಿಸಿದರೆ ಈಗ ನಾವು ಪಡೆಯುವ ಇಳುವರಿ ಪ್ರಮಾಣವೂ ಹೆಚ್ಚು ಇದೆ. ಇತ್ತೀಚಿಗೆ ಕೃಷಿಗೆ ಒಳಪಡುತ್ತಿರುವ ಮಣ್ಣಿನ ಪೋಷಕಾಂಶ ಸ್ಥತಿ ಅಷ್ಟೊಂದು ಉತ್ತಮವಾಗಿಲ್ಲದಿರುವುದೂ ಒಂದು ಕಾರಣ. ಬೇಸಾಯಕ್ಕೆ ಒಳಪಡದ , ಕಾಡು ಮುಂತಾದ ಯಾವುದೇ ಮರಮಟ್ಟುಗಳು ಇಲ್ಲದ , ಬಟ್ಟಬಯಲು , ಗಿಡ ಗಂಟಿಗಳಿಂದ ಕೂಡಿದ, ಎಲ್ಲಿಂದಲೋ ಮಣ್ಣು ತಂದು ಡೊಸಿಂಗ್ ಮಾಡಿದ ಸ್ಥಳದಲ್ಲಿ, ಮೇಲ್ಮಣ್ಣನ್ನು ಮಗುಚು ಹಾಕಿದ ಸ್ಥಳಗಳು ಕೃಷಿಗೆ ಸೇರ್ಪಡೆಗೊಳ್ಳುವ ಕಾರಣ ಅದರಲ್ಲಿ ಮಣ್ಣು ಮೂಲದಲ್ಲಿ ಇರಬೇಕಾದ ಪೋಷಕಗಳು ಇಲ್ಲದೆ, ನಷ್ಟವಾಗಿ ಬೆಳೆ ಸೊರಗುತ್ತದೆ. ಅದನ್ನು ಸರಿಪಡಿಸಲು ಇರುವ ಉಪಾಯ ಅದನ್ನು ಒದಗಿಸುವುದು ಒಂದೇ.
ಅಡಿಕೆ ಬೇಸಾಯ ಮಾಡುವ ರೈತರು ದ್ವಿತೀಯ ಪೋಷಕಗಳಾಗಿ ಬಳಸಬೇಕಾದದ್ದು ಸುಣ್ಣ - ಮೆಗ್ನೀಶಿಯಂ ಮತ್ತು ಗಂಧಕ. ಇವು ಪ್ರಧಾನ ಪೋಷಕಾಂಶಗಳಷ್ಟು ಪ್ರಮಾಣದಲ್ಲಿ ಬೇಕಾಗವುದಿಲ್ಲವಾದರೂ ಅವಶ್ಯಕವಾಗಿ ಬೇಕಾಗುತ್ತದೆ. ಕೆಲವು ರಾಸಾಯನಿಕ ಗೊಬ್ಬರಗಳಲ್ಲಿ ಸುಣ್ಣದ ಅಂಶ ಮತ್ತು ಗಂಧಕ ಅಥವಾ ಮೆಗ್ನೀಶಿಯಂ ಅಂಶ ಒಳಗೊಂಡಿದ್ದರೆ ನಾವು ಬಳಕೆ ಮಾಡದೆಯೂ ಅದು ಸಸ್ಯಗಳಿಗೆ ಪೂರೈಕೆಯಾಗಬಹುದು. ಅದು ಇಲ್ಲದೆ ಹೋದ ಸಂದರ್ಭದಲ್ಲಿ ಅದನ್ನು ಕೊಡಲೇಬೇಕು.
ಸಸ್ಯಗಳಿಗೆ ಪೋಷಕಾಂಶಗಳನ್ನು ಕೊಡುವ ಮುಂಚೆ ಸುಣ್ಣದ ಅಂಶ ಕೊಟ್ಟರೆ, ಉಳಿದ ಯಾವುದೇ ಗೊಬ್ಬರ ಕೊಡದಿದ್ದರೂ ಸಸ್ಯ ಬೆಳವಣಿಗೆ ಒಮ್ಮೆಲೇ ಚೇತರಿಸಿಕೊಳ್ಳುತ್ತದೆ. ಇದುವೇ ಅದರ ಗುಣ. ಮಣ್ಣಿನ ಧಕ್ಕೆ ಸಹನೆ (ಪಿ ಎಚ್ ಮೌಲ್ಯ ) ಗುಣದ ಮೇಲೆ ಕೆಲವು ಪೋಷಕಗಳು ಅಲಭ್ಯಸ್ಥಿತಿಯಲ್ಲಿದ್ದರೆ ಅದನ್ನು ಸುಣ್ಣವೆಂಬ ಪೋಷಕಾಂಶ ಲಭ್ಯವಾಗುವಂತೆ ಮಾಡುತ್ತದೆ. ಮಣ್ಣಿನ ಅಜೀರ್ಣ ಸ್ಥಿತಿಯನ್ನು ಸಮಸ್ಥಿತಿಗೆ ತರಲು ಸುಣ್ಣ ಸಹಕಾರಿ. ಸಸ್ಯ ಬೆಳವಣಿಗೆಗೆ ತಕ್ಷಣ ಬೆಳೆಯಲು ಬೂಸ್ಟ್ ಕೊಡುತ್ತದೆ. ಸುಣ್ಣವನ್ನು ಬರೇ ಅಧಿಕ ಮಳೆ ಬರುವ ಕಡೆ ಬಳಸುವುದು ಎಂಬ ವಿಚಾರ ತಪ್ಪು. ಎಲ್ಲಾ ಬೆಳೆಗಳಿಗೂ ಅದು ಅಗತ್ಯ ಪೋಷಕವಾದ ಕಾರಣ ಪ್ರಮಾಣ ವ್ಯತ್ಯಾಸದಲ್ಲಿ ಇದನ್ನು ಬಳಕೆ ಮಾಡಬೇಕು. ಸಾಂಪ್ರದಾಯಿಕವಾಗಿ ನಾವು ಖನಿಜ ಸುಣ್ಣವಾಗಿ ಚಿಪ್ಪು, ಡೋಲೋಮೈಟ್ ಬಳಕೆ ಮಾಡುತ್ತೇವೆಯಾದರೂ ಈಗ ಸುಣ್ಣದ ಸಾರ ಉಳ್ಳ ಕ್ಯಾಲ್ಸಿಯಂ ನೈಟ್ರೇಟ್, ಚಿಲ್ಲೇಟೆಡ್ ಕ್ಯಾಲ್ಸಿಯಂ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದು ಹೆಚ್ಚು ತೀಕ್ಷ್ಣವಾಗಿದ್ದು ಸಸ್ಯಗಳು ಅದನ್ನು ಬೇಗನೆ ಪಡೆದುಕೊಳ್ಳುತ್ತವೆ. ಸುಣ್ಣ ಹಾಕುವುದರಿಂದ ಮುಖ್ಯ ಪೋಷಕಾಂಶಗಳಲ್ಲದೆ ಸೂಕ್ಷ್ಮ ಪೋಷಕಾಂಶಗಳೂ ಲಭ್ಯವಾಗುತ್ತದೆ. ಸುಣ್ಣವನ್ನು ಅತಿಯಾಗಿ ಹಾಕಬಾರದು . ಮಣ್ಣಿನ ಪಿ ಎಚ್ 7 ಕ್ಕಿಂತ ಕಡಿಮೆ ಬಂದಲ್ಲಿ ಹಾಕಿದರೆ ಸಾಕಾಗುತ್ತದೆ.
ಸಸ್ಯ ಬೆಳವಣಿಗೆ ಕುಂಠಿತವಾಗಲು ಸುಣ್ಣದ ಕೊರತೆಯೊಂದೇ ಕಾರಣವಲ್ಲ. ಇನ್ನಿತರ ಪೋಷಕಗಳೂ ಸೇರಿವೆ. ಅವು ಯಾವುವು. ಅದರ ಕೊರತೆಯಿಂದ ಸಸ್ಯ ಬೆಳವಣಿಗೆ ಏನಾಗುತ್ತದೆ. ಅದನ್ನು ಗುರುತಿಸುವುದು ಹೇಗೆ.
ಎಲ್ಲವನ್ನು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ.
ಮಣ್ಣಿನ ಪಿ ಹೆಚ್ ನಾವೆ ಟೆಸ್ಟ್ ಮಡೊ ಉಪಕರಣ ಇದಿಯ
ReplyDelete