ಈ ಕೃಷಿಕರಿಗೆ ಇಲಿ ಸಾಕುವುದೇ ಕಾಯಕ: ವರ್ಷಕ್ಕೆ ₹3–4 ಲಕ್ಷದಷ್ಟು ಆದಾಯ.



ರಾಮನಗರ ತಾಲ್ಲೂಕಿನ ಅಕ್ಕೂರು ಗ್ರಾಮದ ಪ್ರಗತಿಪರ ರೈತರನ್ನು ಈಗ ಇಲಿಗಳು ಕೈ ಹಿಡಿದಿವೆ. ಇವುಗಳ ಸಾಕಾಣೆಯಲ್ಲಿಯೇ ರೈತರು ಹೆಚ್ಚು ಹೆಚ್ಚು ಆದಾಯ ಕಾಣತೊಡಗಿದ್ದಾರೆ!

ಹೌದು. ವರ್ಷವಿಡೀ ಬೆಳೆದ ಬೆಳೆಗಳನ್ನು ತಿಂದು ಹಾಳು ಮಾಡುತ್ತವೆ ಎಂಬ ಕಾರಣಕ್ಕೆ ರೈತರು ಇಲಿಗಳನ್ನು ದ್ವೇಷಿಸುವುದೇ ಹೆಚ್ಚು. ಆದರೆ ಇದೇ ಇಲಿಗಳು ಈಗ ಬದುಕು ರೂಪಿಸಿಕೊಡುತ್ತಿವೆ. ಈ ಬಿಳಿಯ ಇಲಿಗಳ ಸಾಕಾಣಿಕೆಯನ್ನು ಕೃಷಿಕರು ಉಪಕಸುಬಾಗಿ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿನ ಆರು ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಕೊಂಡಿವೆ. ಒಂದೊಂದು ಕುಟುಂಬವೂ 100 ಇಲಿಗಳನ್ನು ಸಾಕಿಕೊಂಡಿದ್ದು, ಅವುಗಳು ಹಾಕುವ ಮರಿಗಳ ಮಾರಾಟದಿಂದ ವರ್ಷಕ್ಕೆ ₹3–4 ಲಕ್ಷದಷ್ಟು ಆದಾಯ ಕೈಸೇರತೊಡಗಿದೆ.

ಯಾವುದೇ ಔಷಧ, ರೋಗ ನಿರೋಧಕ ಚುಚ್ಚುಮದ್ದುಗಳನ್ನು ಮನುಷ್ಯರಿಗೆ ನೀಡುವ ಮುನ್ನ ಅದನ್ನು ಹತ್ತು ಹಲವು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಪದ್ಧತಿಯು ವೈದ್ಯಕೀಯ ಲೋಕದಲ್ಲಿ ರೂಢಿಯಲ್ಲಿದೆ. ಅದರಲ್ಲೂ ಇಲಿಗಳ ಮೇಲೆ ಇಂತಹ ಪ್ರಯೋಗಗಳು ಹೆಚ್ಚೆಚ್ಚು ನಡೆಯುತ್ತಲೇ ಇವೆ. ಈ ಪ್ರಯೋಗಗಳಿಗೆ ಸಾವಿರಾರು ಇಲಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅಂತಹ ಪ್ರಯೋಗಾಲಯಗಳಿಗೆ ಪೂರೈಕೆ ಮಾಡುವ ಸಲುವಾಗಿ ಬಿಳಿ ಇಲಿ ಅರ್ಥಾತ್‌ ಗಿನಿ ಪಿಗ್‌ (guinea pig) ಸಾಕಾಣಿಕೆಯು ಹೆಚ್ಚು ಪ್ರವರ್ಧಮಾನಕ್ಕೆ ಬರತೊಡಗಿದೆ.

ಅಕ್ಕೂರು ಗ್ರಾಮದ ಪ್ರಗತಿಪರ ರೈತ ಜಯಕುಮಾರ್ ಒಂದೂವರೆ ವರ್ಷದಿಂದ ಈ ಕಸುಬಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊಟ್ಟಿಗೆಯ ಒಂದು ಭಾಗದಲ್ಲಿ ಒಟ್ಟು 70 ಇಲಿಗಳನ್ನು ಸಲಹುತ್ತಿದ್ದಾರೆ. ಅದರಲ್ಲಿ 50 ಹೆಣ್ಣಾದರೆ, 20 ಗಂಡು. ಇವುಗಳು ಕಾಲಕಾಲಕ್ಕೆ ಹಾಕುವ ಮರಿಗಳನ್ನು ಮಾರಾಟ ಮಾಡಿ ಲಾಭ ಗಳಿಸತೊಡಗಿದ್ದಾರೆ. ಈಗಾಗಲೇ ಹೀಗೆ ಆರು ಬಾರಿ ಮರಿಗಳ ಮಾರಾಟ ಮಾಡಿದ್ದಾರೆ.

ಜಯಕುಮಾರ್ ಅವರಿಂದ ಪ್ರೇರೇಪಿತಗೊಂಡು ಗ್ರಾಮದ ಮತ್ತೊಬ್ಬ ಕೃಷಿಕ ಅರೆತಿಮ್ಮಯ್ಯ (ಗಾಂಧಿ) ಅವರೂ ಈ ಇಲಿ ಸಾಕಾಣೆ ಆರಂಭಿಸಿದ್ದಾರೆ. ಇದಕ್ಕೆಂದೇ ತೋಟದ ಮನೆಯಲ್ಲಿ ಸುಮಾರು ₹3 ಲಕ್ಷ ಖರ್ಚು ಮಾಡಿ ಕೊಟ್ಟಿಗೆ ಕಟ್ಟಿಸಿಕೊಂಡಿದ್ದಾರೆ. ಒಂದು ಇಲಿಗೆ ₹800 ರಂತೆ ಒಟ್ಟು ₹80 ಸಾವಿರ ಕೊಟ್ಟು 100 ಇಲಿಗಳನ್ನು ತರಿಸಿಕೊಂಡಿದ್ದಾರೆ. ಅವೂ ಇದೀಗ ತಾನೇ ಮರಿ ಹಾಕುತ್ತಿದ್ದು, ಮೊದಲ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

ಮೊಲ ಸಾಕಾಣೆಗೆ ಪರ್ಯಾಯ: ‘ಈ ಮೊದಲು ಮೊಲ ಸಾಕುತ್ತಿದ್ದೆ. ಆದರೆ ಅವುಗಳನ್ನು ಸಲಹುವುದು ಕಷ್ಟವಾಗಿತ್ತು. ಅವು ಒಮ್ಮೊಮ್ಮೆ 10–12 ಮರಿ ಹಾಕುತ್ತಿದ್ದವು. ಆದರೆ ಅವುಗಳ ಕಾಳಜಿ ವಹಿಸುತ್ತಿರಲಿಲ್ಲ. ಹೀಗಾಗಿ ಮರಿಗಳು ಹುಟ್ಟಿದ ಐದು ದಿನಗಳ ಕಾಲ ಅವುಗಳಿಗೆ ನಾವೇ ಬಾಟಲಿಯಲ್ಲಿ ಹಾಲು ಕುಡಿಸಬೇಕಿತ್ತು. ಈ ಮಧ್ಯೆ ಹಾಲು ಸಿಗದೇ, ಇಲ್ಲವೇ ದೊಡ್ಡ ಮೊಲಗಳ ಕಾಲ್ತುಳಿತಕ್ಕೆ ಸಿಕ್ಕು ಸಾಕಷ್ಟು ಮರಿಗಳು ಸಾಯುತ್ತಿದ್ದವು. ಹೀಗಾಗಿ ಅವುಗಳ ಸಹವಾಸ ಬೇಡ ಎಂದು ನಿರ್ಧರಿಸಿದ್ದೆ. ನಂತರದಲ್ಲಿ ಒಮ್ಮೆ ತಮಿಳುನಾಡಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಬಿಳಿ ಇಲಿಗಳ ಸಾಕಾಣೆ ಬಗ್ಗೆ ತಿಳಿಯಿತು. ಕುತೂಹಲ ಮೂಡಿ ಅವುಗಳನ್ನು ಸಾಕುವ ನಿರ್ಧಾರಕ್ಕೆ ಬಂದೆ. ಈಗ ಅದೇ ನಮ್ಮ ಕೈಹಿಡಿದಿದೆ’ ಎಂದು ಜಯಕುಮಾರ್ ಹೇಳುತ್ತಾರೆ.

ಮೊಲಕ್ಕೆ ಬಳಸುತ್ತಿದ್ದ ಬೋನುಗಳು, ಪರಿಕರಗಳನ್ನೇ ಇಲಿ ಸಾಕಾಣೆಗೂ ಬಳಸಿಕೊಳ್ಳಲಾಗಿದೆ. ದಿನಕ್ಕೆ ಎರಡು ಅಥವಾ ಮೂರು ಬಾರಿ ಅವುಗಳಿಗೆ ಆಹಾರ ಕೊಡುತ್ತಿದ್ದಾರೆ. ಜೋಳದ ಎಳೆಯ ಕಡ್ಡಿ, ಕುದುರೆ ಮೆಂತ್ಯೆ, ಗರಿಕೆ ಹುಲ್ಲು, ರೇಷ್ಮೆ ಸೊಪ್ಪುಗಳನ್ನು ಅವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಜೊತೆಗೆ ಪ್ರತಿ ಇಲಿಗೆ ದಿನಕ್ಕೆ 50 ಗ್ರಾಂನಷ್ಟು ಕಡಲೆ ಹೊಟ್ಟು, ಬೂಸ ನೀಡುತ್ತಾ

ಬಂದಿದ್ದಾರೆ. ಇಲಿಗಳಿಗೆ ಬೇಕಾದ ಮೇವನ್ನು ಹೊಲದಲ್ಲಿಯೇ ಬೆಳೆದುಕೊಳ್ಳಲಾಗುತ್ತಿದೆ. ಕಡಲೆ ಹೊಟ್ಟು, ಬೂಸಕ್ಕೆ ಮಾತ್ರ ದುಡ್ಡು ಖರ್ಚಾಗುತ್ತಿದೆ.

ನಿರ್ವಹಣೆ ಸುಲಭ: ಇಲಿಗಳಿಗೆ ಆಹಾರ ನೀಡಲು, ಸ್ವಚ್ಛತಾ ಕಾರ್ಯಕ್ಕೆ ಜನ ಬೇಕು. ಉಳಿದ ಅವಧಿಯಲ್ಲಿ ಅವುಗಳನ್ನು ನೋಡಿಕೊಳ್ಳುವುದು ಬೇಕಿಲ್ಲ. ಆಹಾರದಲ್ಲಿಯೇ ಅವು ನೀರನ್ನು ಪಡೆದುಕೊಳ್ಳುವುದರಿಂದ ನೀರು ಇಡುವ ಅಗತ್ಯವೂ ಇಲ್ಲ. ಕೋಳಿ, ಮೊಲಗಳಂತೆ ಇವುಗಳಿಗೆ ರೋಗ ಬಾಧೆ ಕಾಡುವುದಿಲ್ಲ. ಪ್ರಯೋಗಾಲಯಗಳಿಗೆ ಬಳಸುವುದರಿಂದ ಯಾವುದೇ ಔಷಧ ನೀಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಇಲಿ ಸಾಕಾಣಿಕೆಯು ಸುಲಭದ ಕೆಲಸವಾಗಿದೆ ಎನ್ನುತ್ತಾರೆ ಈ ರೈತರು.

ಮಾರಾಟ ಹೇಗೆ: ಸದ್ಯ ಈ ರೈತರು ತಮಿಳುನಾಡು ಮೂಲದ ಕಂಪನಿಯೊಂದರ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವರೇ ನೇರವಾಗಿ ರೈತರಿಂದ ಇಲಿಯ ಮರಿಗಳನ್ನು ಖರೀದಿ ಮಾಡುತ್ತಿದ್ದಾರೆ. 20–30 ದಿನ ಪ್ರಾಯದ, 150 ಗ್ರಾಂನಿಂದ 400 ಗ್ರಾಂನಷ್ಟು ತೂಕದ ಮರಿಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಹೀಗೆ ಖರೀದಿಯಾದ ಪ್ರತಿ ಮರಿಗೆ ₹400–500 ಹಣ ನೀಡುತ್ತಿದ್ದಾರೆ.

ವಯಸ್ಕ ಇಲಿಗಳ ಪೈಕಿ ಗಂಡು–ಹೆಣ್ಣಿನ ಅನುಪಾತ 20–50ರಂತೆ ನೋಡಿಕೊಳ್ಳಲಾಗುತ್ತಿದೆ. ಹೆಣ್ಣು ಇಲಿಗಳು ಸರಾಸರಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಮರಿ ಹಾಕುತ್ತಿವೆ. ಒಂದು ಇಲಿ ಒಮ್ಮೆಗೆ ಸರಾಸರಿ ಮೂರು ಮರಿ ಹಾಕುತ್ತಿದೆ. ಹೀಗಾಗಿ ಪ್ರತಿ ಇಲಿ ವರ್ಷವೊಂದಕ್ಕೆ 18–20 ಮರಿ ಹಾಕುತ್ತಿದೆ. ಇದರಿಂದ ವರ್ಷಕ್ಕೆ ಒಂದು ಇಲಿಯಿಂದಲೇ 8 ಸಾವಿರದಷ್ಟು ಆದಾಯ ಬರುತ್ತಿದೆ. ಆದಾಯದಲ್ಲಿ ಅರ್ಧದಷ್ಟು ಖರ್ಚು ಕಳೆದರೂ ಇನ್ನರ್ಧ ಲಾಭ ಸಿಗುತ್ತಿದೆ. ನೂರು ಇಲಿ ಸಾಕಿದರೆ ವರ್ಷಕ್ಕೆ ಕಡಿಮೆ ಎಂದರೂ ₹2ರಿಂದ 3 ಲಕ್ಷದಷ್ಟು ಲಾಭ ಪಡೆಯಬಹುದು ಎನ್ನುತ್ತಾರೆ ಜಯಕುಮಾರ್‌.

ಇಲಿಗಳ ಸಂತಾನೋತ್ಪತ್ತಿ ಪ್ರಕ್ರಿಯೆಯು ತೀವ್ರವಾಗಿದೆ. ಅವು ಮರಿ ಹಾಕಿದ ಮರು ಹೊತ್ತಿನಲ್ಲಿಯೇ ಮತ್ತೆ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಮರಿಯು ಜನಿಸಿದ ಐದು ನಿಮಿಷದಲ್ಲಿಯೇ ಹಾಲು ಕುಡಿದರೆ, ಕೆಲವೇ ಗಂಟೆಗಳಲ್ಲಿ ಮೇಯುವುದನ್ನು ಕಲಿಯುತ್ತದೆ. ಒಂದು ಹೆಣ್ಣು ಇಲಿ ತನ್ನ ಮರಿಗಳಿಗೆ ಮಾತ್ರವಲ್ಲದೆ ಇತರೇ ಮರಿಗಳಿಗೂ ಬೇಧವಿಲ್ಲದೆ ಹಾಲು ಕುಡಿಸುತ್ತದೆ. ಹೀಗಾಗಿ ಮೊಲಗಳಂತೆ ಇವುಗಳ ಮರಿಗಳನ್ನು ಜೋಪಾನವಾಗಿ ಸಲಹುವ ತಾಪತ್ರಯ ಇಲ್ಲ. ಒಂದು ಇಲಿಯನ್ನು ಐದಾರು ವರ್ಷ ಸಾಕಬಹುದು ಎನ್ನುತ್ತಾರೆ ಅರೆತಿಮ್ಮಯ್ಯ.

ಮಾರುಕಟ್ಟೆಯಲ್ಲಿ ಬೇಡಿಕೆ: ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಔಷಧ ಪ್ರಯೋಗಾಲಯಗಳು ವಿವಿಧ ಪ್ರಯೋಗಗಳಿಗೆ ಇಲಿಗಳನ್ನು ಬಳಸಿಕೊಳ್ಳುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಇಲಿಯ ಬೆಲೆ ₹1000–1500ರವರೆಗೂ ಇದೆ. ಹೆಚ್ಚಿನ ಬೇಡಿಕೆಯೂ ಇದೆ. ಇಲಿಗಳನ್ನು ಮಾರಾಟ ಮಾಡುವವರು ಸಂಬಂಧಿಸಿದ ಸಂಸ್ಥೆಗಳಿಂದ ಪರವಾನಗಿ ಹೊಂದಿರಬೇಕಾಗುತ್ತದೆ. ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ಸದ್ಯ ಇಲ್ಲಿನ ರೈತರು ಮಧ್ಯವರ್ತಿಗಳಿಗೆ ಇಲಿಗಳನ್ನು ಸರಬರಾಜು ಮಾಡುತ್ತಿದ್ದು, ಅವರು ಪರವಾನಗಿ ಹೊಂದಿದವರ ಮೂಲಕ ದುಪ್ಪಟ್ಟು ದರಕ್ಕೆ ಮರು ಮಾರಾಟ ಮಾಡುತ್ತಿದ್ದಾರೆ. ನೇರ ಮಾರಾಟಕ್ಕೆ ಮುಂದಾದಲ್ಲಿ ರೈತರಿಗೇ ಹೆಚ್ಚಿನ ಲಾಭ ದೊರೆಯಲಿದೆ. ಹೀಗಾಗಿ ಕಾನೂನಾತ್ಮಕವಾಗಿ ಪರವಾನಗಿ ಪಡೆದು, ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ನೇರ ಮಾರಾಟ ಮಾಡಲು ಈ ರೈತರು ಚಿಂತನೆ ನಡೆಸಿದ್ದಾರೆ.

ಸದ್ಯ ವಿಜ್ಞಾನ ಲೋಕದ ಪ್ರಯೋಗಗಳಿಗೆ ಇಲಿಗಳ ಬಳಕೆ ಕಡಿಮೆ ಮಾಡಬೇಕು ಎನ್ನುವ ಕೂಗೂ ಎದ್ದಿದೆ. ಇದು ಕಾರ್ಯಾರೂಪಕ್ಕೆ ಬಂದಲ್ಲಿ ಮಾತ್ರ ಈ ಇಲಿಗಳ ಬೇಡಿಕೆ ಕೊಂಚ ತಗ್ಗಲಿದೆ. ಹೀಗಾಗಿ ಕಾದು ನೋಡಿ ಮುಂದಿನ ನಡೆ ಇಡಲು ಇಲ್ಲಿನ ರೈತರು ಸಿದ್ಧತೆ ನಡೆಸಿದ್ದಾರೆ.
ಸಂಪರ್ಕಕ್ಕೆ 9741631862.

No comments:

Post a Comment