ಸಾಮಾನ್ಯವಾಗಿ ಎಲ್ಲರು ರನ್ನರ್ ಬಳ್ಳಿಗಳನ್ನು ನಾಟಿ ಮಾಡಲು ಬಳಕೆ ಮಾಡುತ್ತಾರೆ. ಈ ರನ್ನರ್ ಬಳ್ಳಿಗಳ ಎಲೆ ಕಂಕುಳದಲ್ಲಿ ಮೊಗ್ಗು ಬಂದು ಅಡ್ಡ ಚಿಗುರುಗಳು ಬಂದು ಅದರಲ್ಲಿ ಹೂ ಕರೆಗಳು ಬಂದಾಗ ಅದರಲ್ಲಿ ಇಳುವರಿಗೆ ಪ್ರಾರಂಭವಾಗುತ್ತದೆ. ಅದಕ್ಕೆ ಏನಿಲ್ಲವೆಂದರೂ ಎರಡು ವರ್ಷ ಬೇಕು. ಆದರೆ ಬೆಳೆಯುತ್ತಿರುವ ಬಳ್ಳಿಗಳಲ್ಲಿ ಮೇಲೆ ಏರುವ ಬಳ್ಳಿ ಇರುತ್ತದೆ. ಅದು ಹಬ್ಬು ಬಳ್ಳಿಗಿಂತ ಭಿನ್ನ. ಅದನ್ನು ನಾಟಿ ಮಾಡುವದರಿಂದ ಬೇಗ ಇಳುವರಿ ಪಡೆಯಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಈಗಾಗಲೇ ನಾಟಿ ಮಾಡಿದ ಬಳ್ಳಿಗಳಿದ್ದರೆ ಅದನ್ನು ನಿರ್ದಿಷ್ಟ ಅಡಿ ಎತ್ತರದ ನಂತರ ಪ್ರೂನಿಂಗ್ ಮಾಡುವುದಿದ್ದರೆ ಆಗ ದೊರೆಯುವ ತುದಿ ಭಾಗವನ್ನು ನಾಟಿಗೆ ಬಳಕೆ ಮಾಡಬಹುದು. ಅಡಿಕೆ, ತೆಂಗಿನ ಮರದಲ್ಲಿ ಜಾರಲ್ಪಟ್ಟ ಬಳ್ಳಿ ಇದ್ದರೆ ಅದನ್ನು ನಾಟಿಗೆ ಬಳಕೆ ಮಾಡಬಹುದು. ಇದನ್ನು ಸ್ವಲ್ಪ ನಿಗಾದಲ್ಲಿ ನಾಟಿ ಮಾಡಬೇಕು. ಹುಡಿಯಾದ ಕಾಂಪೋಸ್ಟು ಗೊಬ್ಬರ ಅಥವಾ ಕೋಕೊಪೆಟ್ ನಲ್ಲಿ ನಾಟಿ ಮಾಡಿದರೆ ಬೇರು ಬರುತ್ತದೆ. ನಾಟಿ ಮಾಡಿ ಬೇರು ಬರುವ ತನಕ ಪ್ಲಾಸ್ಟಿಕ್ ಹೊದಿಕೆ ಮಾಡಿದರೆ ಒಳ್ಳೆಯದು. ಇದರ ಬೆಳವಣಿಗೆ ಹಬ್ಬು ಬಳ್ಳಿಗಿಂತ ವೇಗ.
ಅಧಿಕ ಇಳುವರಿ ದೃಷ್ಟಿಯಿಂದ ಈ ತರಹದ ಬಳ್ಳಿ ನಾಟಿ ಉತ್ತಮ. ಈ ಬಳ್ಳಿ ಪ್ರಾರಂಭಿಕ ಬೆಳವನಣಿಗೆಯಲ್ಲೇ ಇಳುವರಿ ಕೊಡಬಲ್ಲ ಅಡ್ಡ ಚಿಗುರುಗಳನ್ನು (ಕವಲು ಕೊಂಬೆ ) ಬಿಡುತ್ತದೆ. ಹಬ್ಬು ಬಳ್ಳಿಯಾದರೆ ನೆಟ್ಟ ಮೂಲ ಬಳಿ ಒಂದೂವರೆ - ಎರಡು ವರ್ಷದ ತನಕ ಆಧಾರಕ್ಕೆ ಹಬ್ಬುತ್ತಾ ಏರುತ್ತದೆ. ಸುಮಾರಾಗಿ 4-5 ಅಡಿ ಬೆಳೆದ ನಂತರ ಅದರಲ್ಲಿ ಕವಲು ಮೊಗ್ಗುಗಳು ಮೂಡಿ ಅದು ನೇರ ಅಡ್ಡಕ್ಕೆ ಬೆಳೆಯುತ್ತದೆ. ಆ ಅಡ್ಡ ಚಿಗುರುಗಳು (Horizontal shoots) ಮಾತ್ರ ಹೂ ಕರೆಯನ್ನು ಬಿಡುವಂತದ್ದು. ಅಡ್ಡ ಚಿಗುರು ಮೊಗ್ಗುಗಳು ಹೊರಟ ನಂತರ ನಾಟಿ ಮಾಡಿದ ಬಳ್ಳಿಯ ಮುಂದಿನ ಬೆಳವಣಿಗೆ ಸ್ವಲ್ಪ ಭಿನ್ನವಾಗಿರುತ್ತದೆ. ಅಡ್ಡ ಚಿಗುರುಗಳನ್ನು ಉತ್ಪಾದಿಸುತ್ತಾ ಮೇಲಕ್ಕೆ ಬೆಳೆಯುವ ಬಳ್ಳಿಗಳನ್ನು ನೇರ ಬಳ್ಳಿಗಳು ಎಂದು ಕರೆಯುತ್ತಾರೆ. ಇದನ್ನು ನಾಟಿ ಮಾಡಿದರೆ ಅದರಲ್ಲಿ ಬೇಗನೆ ಹೂ ಕರೆ ಕೊಡುವ ಅಡ್ಡ ಕೊಂಬೆಗಳು ಬರುತ್ತದೆ. ಇದನ್ನು ಸಸ್ಯಾಭಿವೃದ್ದಿ ಮಾಡಿದಾಗ ಅದಕ್ಕೂ ನೇರ ಬೆಳೆಯುವ ಗುಣ ಬರುತ್ತದೆ. ಹಬ್ಬು ಬಳ್ಳಿಯಲ್ಲಿ ಮೊದಲು ದೂರದ ಅಂತರದಲ್ಲಿ ಅಡ್ಡ ಕೊಂಬೆಗಳು ಮೂಡಿದರೆ ಮೇಲೆ ಹೊದಂತೆ ಹತ್ತಿರ ಹತ್ತಿರವಾಗುತ್ತದೆ. ಆದರೆ ಈ ವಿಧಾನದಲ್ಲಿ ಮಾಡಿದ ಸಸ್ಯಾಭಿವೃದ್ದಿಯಲ್ಲಿ ಬುಡದಿಂದಲೇ ಕವಲು ಕೊಂಬೆಗಳು ಬರುತ್ತದೆ. ಈ ಕವಲು ಕೊಂಬೆಗಳ ಅಂತರವೂ ಪರಸ್ಪರ ಹತ್ತಿರ ಇರುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಭಿವೃದ್ದಿ ಮಾಡಲು ಆಗುವುದಿಲ್ಲ.
ನೇರ ಬಳ್ಳಿ
ಇಳಿ ಬಳ್ಳಿ
ಹೆಚ್ಚಿನ ಪ್ರಮಾಣದಲ್ಲಿ ಸಸ್ಯೋತ್ಪಾದನೆ ಮಾಡಲಿಕ್ಕೂ ಕೆಲವು ಸುಲಭ ವಿಧಾನಗಳಿವೆ.
ನೇರ ಚಿಗುರುಗಳನ್ನು ನಾಟಿ ಮಾಡಿದರೆ ಉತ್ತಮ ಎಂಬುದೇನೋ ನಿಜ. ಆದರೆ ಅದು ಇರುವುದು ಮರದ ತುದಿಯಲ್ಲಿ. ಅದನ್ನು ಕತ್ತರಿಸಿ ತೆಗೆದರೆ ಎಷ್ಟು ಸಿಗಬಹುದು? ನೂರು ಬಳ್ಳಿ ಬುಡ ಇದ್ದರೆ,ಹೆಚ್ಚೆಂದರೆ ನೂರು ಸಿಗಬಹುದು. ಇದು ತೆಗೆಯಲಿಕ್ಕೂ ಕಷ್ಟ. ಬದುಕಿಸಲಿಕ್ಕೂ ಕಷ್ಟವಾಗಬಹುದು. ಅದಕ್ಕಾಗಿಯೇ ನೇರ ಚಿಗುರುಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವ ತಾಂತ್ರಿಕತೆ ಇದೆ.
ಒಂದು ಪಾಲೀಹೌಸ್, ಅದರೊಳಗೆ ಒಂದು 4-5 ಅಡಿ ಎತ್ತರದ ಗೂಟ ಹಾಕಿ ಅದರೊಳಗೆ ಸುಮಾರು 1/2 ಅಡಿ ಅವಕಾಶ ಉಳಿಸಿ ಸುತ್ತಲೂ ಪ್ಲಾಸ್ಟಿಕ್ ನ 1/2 ಇಂಚಿನ ವಯರ್ ಮೆಷ್ ಹಾಕಿ ಒಳಗಿನ ಸ್ಥಳಾವಕಾಶದೊಳಗೆ ಕೋಕೊಪೆಟ್ (ತೆಂಗಿನ ನಾರಿನ ಹುಡಿ ) ತುಂಬುವುದು. ಅದರೊಂದಿಗೆ ಸಸ್ಯ ಬೆಳವಣಿಗೆ ಉತ್ತಮವಾಗಳು ಜೈವಿಕ ಬೆಳವಣಿಗೆ ಪ್ರಚೋದಕ , ಟ್ರೈಕೋಡರ್ಮಾ ಮುಂತಾದದವುಗಳನ್ನು ಹಾಕಬೇಕು. ಮೆಷ್ ನ ಹೊರಭಾಗದಲ್ಲಿ ನೆಲದಲ್ಲಿ ಸ್ವಲ್ಪ ಕೊಕೊಪೇಟ್ ಹಾಕಿ ಅಲ್ಲಿ ನೇರ ಬಳ್ಳಿಯನ್ನು ನಾಟಿ ಮಾಡಬೇಕು. ಅದು ಸುರಕ್ಷಿತ ವಾತಾವರಣ ಆದ ಕಾರಣ ಗಂಟಿನಲ್ಲಿದ್ದ ಬೇರು ಅಲ್ಲೇ ಬೆಳೆದು ಬಳ್ಳಿ ಚಿಗುರುತ್ತಾ ಮೆಷ್ ಗೆ ಏರುತ್ತಿರುತ್ತದೆ. ಮೇಲೆ ಎರುತ್ತಿದ್ದಂತೆ ಪ್ರತೀ ಗಣ್ಣುಗಳಿಗೂ ಒಂದು ಕಡ್ಡಿಯನ್ನು ಮಲಗಿಸಿದ ಆಕಾರದಲ್ಲಿ ಮುರಿದು ಚುಚ್ಚಬೇಕು . ಹಾಗೆ ಚುಚ್ಚಿದಾಗ ಗಂಟುಗಳ ಬೇರು ಒಳಗಿನ ಮಾಧ್ಯಮದ ಸಾರದ ಸಂಪರ್ಕದಿಂದ ಉತ್ತಮವಾಗಿ ಬೆಳೆಯುತ್ತದೆ. ಸುಮಾರು 3 ಅಡಿ ಎತ್ತರಕ್ಕೆ ಬೆಳೆದ ನಂತರ ಬುಡದಿಂದ 1 ಅಡಿ ಬಿಟ್ಟು ತುಂಡು ಮಾಡಿ ಅದನ್ನು 4 ಇಂಚಿನ ಪಾಲಿಥೀನ್ ಕೊಟ್ಟೆಗೆ ವರ್ಗಾಯಿಸಬೇಕು.
<
ಬಳ್ಳಿ ದೊಡ್ಡದಿದ್ದು ವಾಲುವ ಕಾರಣಕ್ಕಾಗಿ ಒಂದು ಕೋಲು ಊರಬೇಕು. ಅದನ್ನು ತಕ್ಷಣವೇ ICU ನಲ್ಲಿ ಇಡುವಂತೆ ಮತ್ತೊಂದು ಪಾಲೀಹೌಸ್ ಗೆ ವರ್ಗಾಯಿಸಬೇಕು 20 ದಿನದಲ್ಲಿ ಅದು ಚೆನ್ನಾಗಿ ಬೇರು ಬಿಟ್ಟಿರುತ್ತದೆ. ನಂತರ ಅದನ್ನು ಹೊಲದಲ್ಲಿ ನಾಟಿ ಮಾಡಬಹುದು. ಒಮ್ಮೆ ಕತ್ತರಿಸಿದ ಜಾಗದಲ್ಲಿ ಮತ್ತೆ ಒಂದು ಇಲ್ಲವೇ ಎರಡು ಮೊಗ್ಗುಗಳು ಬಂದು ಮತ್ತೆ ಕೆಲವೇ ದಿನಗಳಲ್ಲಿ ಅದು ಬೆಳೆಯುತ್ತದೆ. ಹೀಗೆ ವರ್ಷಕ್ಕೆ ಒಂದು ಬುಡದಿಂದ 10 ಕ್ಕೂ ಹೆಚ್ಚು ನೇರ ಚಿಗುರು ಬಳ್ಳಿಯ ಸಸ್ಯವನ್ನು ಪಡೆಯಬಹುದು.

ಕರಿಮೆಣಸಿನ್ನು ಕಸಿ ಕಟ್ಟುವ ಮೂಲಕ ಸಸ್ಯಾಭಿವೃದ್ದಿ ಮಾಡಬಹುದು.
No comments:
Post a Comment