ಕರಿಮೆಣಸಿನ ಬೆಳೆ ಅಧಿಕ ಸೆನ್ಸಿಟಿವ್ ಬೆಳೆಯಾಗಿದ್ದು ಮಳೆಗಾಲದ ಅಧಿಕ ತೇವಾಂಶದಿಂದ ಕೂಡಿದ ವಾತಾವರಣ ಅದನ್ನು ಬದುಕಿಸಲೂ ಬಹುದು, ಕೊಲ್ಲಲು ಬಹುದು. ಅದನ್ನು ಬದುಕಿಸಿ ಉಳಿಸುವ ಕೆಲಸ ನಮ್ಮದು.
ಬೇರು ವಲಯ ಸುರಕ್ಷಿತವಾಗಿದ್ದರೆ ಅದು ಆರೋಗ್ಯ ರಕ್ಷಣೆಗೆ ತುಂಬಾ ಸಹಕರಿಸುತ್ತದೆ. ಮೆಣಸಿಗೆ ಕೂದಲಿನಂತ ಬೇರುಗಳಿದ್ದು ಇದೇ ಆಹಾರ ಸರಬರಾಜು ಮಾಡುತ್ತದೆ. ಯಾವುದೇ ಸಸ್ಯದ ಬೇರಿನ ಬೆಳವಣಿಗೆಗೆ ಬೆಚ್ಚನೆಯ ಸ್ಥಿತಿ ಇರಲೇಬೇಕು. ಬೇರು ವಲಯದ ಸುರಕ್ಷತೆಗಾಗಿ ಮಳೆಗಾಲ ಪ್ರಾರಂಭದಲ್ಲೇ ಬಸಿಲುಗಾಲುವೆಗಳನ್ನು ಸರಿಪಡಿಸಿ ನೀರು ಚೆನ್ನಾಗಿ ಬಸಿಯುವಂತೆ ಮಾಡಿಕೊಳ್ಳಿ. ಮೆಣಸಿನ ಬಳ್ಳಿಯ ಬುಡದಲ್ಲಿ 20 ನಿಮಿಷ ಕಾಲ ನೀರು ನಿಂತರೆ ಅದರ ಬೇರು ವ್ಯೂಹಕ್ಕೆ ಉಸಿರಾಟ ತೊಂದರೆ ಉಂಟಾಗುತ್ತದೆ. ಬೇರು ಕೊಳೆಯಲಾರಂಭಿಸುತ್ತದೆ. ಅದು ಮಳೆಗಾಲ ಮದ್ಯ ಅಥವಾ ಮುಗಿಯುವ ಸಮಯದಲ್ಲಿ ಬಳ್ಳಿ ಒಣಗುವ ಮೂಲಕ ಗೋಚರಕ್ಕೆ ಬರುತ್ತದೆ. ಮಳೆಗಾಲಕ್ಕೆ ಮುನ್ನ ಬಳ್ಳಿಯ ಬುಡಕ್ಕೆ ಮಣ್ಣು ಏರಿಸಿ ಹೊಸ ಬೇರು ಹುಟ್ಟಿ ಬೆಳೆಯುವಂತೆ ಅನುಕೂಲ ಮಾಡಿಕೊಡಬೇಕು. ಮಳೆಗಾಲ ಬಂದ ನಂತರ ಬುಡದಲ್ಲಿ ನೀರು ನಿಲ್ಲುವುದು ಕಂಡುಬಂದರೆ ಅದನ್ನು ಕಾಲುವೆ ಮಾಡಿ ಬಸಿದು ಹೊಗುವಂತೆ ಮಾಡಿ.
ಮಳೆಗಾಲ ಪ್ರಾರಂಭದ ಸಮಯದಲ್ಲಿ ಒಂದು ಬಳ್ಳಿಗೆ ಸಾರಜನಕ 100ಗ್ರಾಂ, ರಂಜಕ 40 ಗ್ರಾಂ,ಪೊಟ್ಯಾಶಿಯಂ 140 ಗ್ರಾಂ ಮತ್ತು ಕಾಂಪೋಸ್ಟು ಗೊಬ್ಬರ ಕೊಡಬೇಕು. ಕಾಂಪೋಸ್ಟು ಗೊಬ್ಬರದ ಜೊತೆಗೆ ಬೆವಿನ ಹಿಂಡಿ ಸೇರ್ಪಡೆ ಮಾಡಿದರೆ ದುಂಡಾಣು ಹುಳ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. ಜೋರಾಗಿ ಮಳೆ ಹಿಡಿಯುವ ಮುಂಚೆ ಕೊಟ್ಟು ಆಗಬೇಕು.
ಟ್ರೈಕೋಡರ್ಮಾ, ಪೆಸಿಲೋಮೈಸಿಸ್, ವರ್ಟಿಸೀಲಿಯಂ ಮೆಟರೈಜಿಯಂ, ಮೈಕೋರೈಝಾ ಇನ್ನಿತರ ಜೈವಿಕ ಗೊಬ್ಬರಗಳನ್ನೂ ಸಹ ಕಾಂಪೋಸ್ಟು ಗೊಬ್ಬರ ಕೊಡುವ ಸಮಯದಲ್ಲಿ ಕೊಟ್ಟರೆ ಒಳ್ಳೆಯದು. ಬಳ್ಳಿಯ ಬುಡಭಾಗವನ್ನು ಬುಡ ಏರಿಕೆ ಮಾಡಿ ಬದಿ ತಗ್ಗಾಗುವಂತೆ ಸ್ಲೋಪ್ ಮಾಡಬೇಕು. ಅನುಕೂಲ ಇದ್ದರೆ ಬುಡ ಭಾಗಕ್ಕೆ ಪಾಲಿಥೀನ್ ಹೊದಿಕೆ ಹಾಕಿದರೆ ನೀರು ಇಳಿದು ಹೋಗಿ ಬೇರಿನ ಬೆಳವಣಿಗೆಗೆ ಬೆಚ್ಚಗೆ ಉಂಟಾಗಿ ಬೇರು ಅಭಿವೃದ್ಧಿಯಾಗುತ್ತದೆ. ಬುಡಭಾಗದಲ್ಲಿ ಹಬ್ಬಿರುವ ಬಳ್ಳಿಗಳನ್ನು ಮಳೆಗಾಲ ಬರುವ ಸಮಯದಲ್ಲಿ ಕತ್ತರಿಸಿ ತೆಗೆಯಬೇಕು.
ಶೀಘ್ರ ಸೊರಗು ರೋಗ ಬರುವಾಗ ಮೊದಲು ಬೇರಿಗೆ ತೊಂದರೆ ಉಂಟಾಗಿ ಬಳ್ಳಿಯ ಬುಡ ಭಾಗದ ಮೂಲಕ ಶಿಲೀಂದ್ರ ಹಬ್ಬುತ್ತದೆ. ಬಳ್ಳಿಯ ಬುಡ ಭಾಗ ಶಿಲೀಂದ್ರ ಸೋಂಕು ಮುಕ್ತವಾಗಲು ಬಳ್ಳಿಗೆ ಶೇ.10ರ ಬೋರ್ಡೋ ಪೇಸ್ಟ್ ಅನ್ನು ಲೇಪನ ಮಾಡುವುದು ಉತ್ತಮ. ಒಂದು ಮೀಟರ್ ಎತ್ತರದ ತನಕ ಪ್ರಧಾನ ಬಳ್ಳಿಗೆ ಬ್ರೆಷ್ ಮೂಲಕ ಇದನ್ನು ಲೇಪನ ಮಾಡಬೇಕು. ಸಿದ್ದ ರೂಪದ ಬೋರ್ಡೋ ಪೇಸ್ಟ್ ದೊರೆಯುತ್ತದೆ.
ಕೊಳೆ ರೋಗ ಮುನ್ನೆಚ್ಚರಿಕೆಯಾಗಿ ಸಿಂಪರಣೆ ಮಾಡುವ ಬೋರ್ಡೋ ದ್ರಾವಣವನ್ನು ಎಲೆ ಅಡಿ ಭಾಗಕ್ಕೂ ಬೀಳುವಂತೆ,ಎಲ್ಲಾ ಎಲೆಗಳಿಗೂ ತಗಲುವಂತೆ ಸಿಂಪಡಿಸಬೇಕು. ಯಾವಾಗಲೂ ಹೈ ಪ್ರೆಷರ್ ಗನ್ ನಲ್ಲಿ ಸಿಂಪರಣೆ ಮಾಡಿದಾಗ ಎಲೆಗಳು ಅಲುಗಾಡಿ ಎಲೆಗಳ ಎಲ್ಲಾ ಭಾಗಕ್ಕೂ ಔಷಧಿ ತಗಲುತ್ತದೆ. (ಸಿಂಪರಣೆ ಮಾಡುವಾಗ ಆದಷ್ಟು ಇಬ್ಬನಿ ತರಹ ಬೀಳುವಂತಿರಲಿ. ಪ್ರೆಷರ್ ಹೆಚ್ಚಾದರೆ ಹೂ ಗೊಂಚಲಿಗೆ ತೊಂದರೆಯಾಗುತ್ತದೆ. ) ಬೋರ್ಡೋ ದ್ರಾವಣವನ್ನು ಬುಡಕ್ಕೆ ಎರೆಯುವುದಿದ್ದರೆ ಒಂದು ಫಲ ಕೊಡುವ ಬಳ್ಳಿಗೆ 2 - 5 ಲೀ. ತನಕ ಎರೆಯಬಹುದು. ಎರೆಯುವಾಗ ಬೇರು ವ್ಯೂಹದ ಸುತ್ತಲೂ ಬಿಳುವಂತೆ ರೋಸ್ ಕ್ಯಾನ್ ಮೂಲಕ ಎರೆಯಬೇಕು. ಮಳೆಗಾಲದಲ್ಲಿ ಬುಡ ಭಾಗವನ್ನು ಕೆರೆಯಬಾರದು.
ಮಳೆಗಾಲಕ್ಕೆ ಮುನ್ನ ಬಳ್ಳಿಗೆ ನೆರಳು ಮಾಡುವ ಮರಮಟ್ಟುಗಳ ಗೆಲ್ಲುಗಳನ್ನು ತೆಗೆಯಬೇಕು. ಗಾಳಿ, ಬೆಳಕು ಸರಿಯಾಗಿ ದೊರೆತರೆ ರೋಗ ಬರುವ ಸಾಧ್ಯತೆ ಕಡಿಮೆ. ಮಳೆಗಾಲ ಬಂದು ಬಳ್ಳಿ ಚಿಗುರಲು ಪ್ರಾರಂಭವಾಗುವ ಸಮಯದಲ್ಲಿ ಒಂದು ಬಾರಿ ಗೊಬ್ಬರದ ಪತ್ರ ಸಿಂಚನ ಮಾಡಿದರೆ ಒಳ್ಳೆಯದು. 1 ಕಿಲೋ ಮೋನೋ ಪೊಟ್ಯಾಶಿಯಂ ಪೋಸ್ಫೇಟ್ ಹಾಗೂ 250 ಗ್ರಾಂ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪರಣೆ ಮಾಡಿದರೆ ಹೂ ಬರುವಿಕೆ ಮತ್ತು ಕಾಯಿ ಕಚ್ಚುವಿಕೆ ಉತ್ತಮವಾಗುತ್ತದೆ.
No comments:
Post a Comment